ADVERTISEMENT

ಮೇಕೆದಾಟು ಯೋಜನೆಗೆ ಶೀಘ್ರ ಒಪ್ಪಿಗೆ: ಬೊಮ್ಮಾಯಿ ಮನವಿ

ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 20:15 IST
Last Updated 17 ಜೂನ್ 2022, 20:15 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಇದ್ದಾರೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಇದ್ದಾರೆ   

ನವದೆಹಲಿ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನುನವದೆಹಲಿಯಲ್ಲಿ ಶುಕ್ರವಾರ ಭೇಟಿಯಾದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಗೆ ಶೀಘ್ರ ಅನುಮತಿ ನೀಡುವಂತೆ ಮನವಿ ಮಾಡಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇದೇ 23ರಂದು ನಡೆಯಲಿದ್ದು, ಯೋಜನೆಯ ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ ಸಿಗುವ ವಿಶ್ವಾಸ ಇದೆ. ಈ ಬಗ್ಗೆ ಸಚಿವರ ಗಮನ ಸೆಳೆಯಲಾಗಿದೆ ಎಂದು ಬೊಮ್ಮಾಯಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಶೀಘ್ರ ಇದಕ್ಕೆ ಒಪ್ಪಿಗೆ ಸಿಗುವ ವಿಶ್ವಾಸ ಇದೆ. ಯೋಜನೆಗೆ ಕೇಂದ್ರದ ಪಾಲಿನ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಸಹ ಸಚಿವರಲ್ಲಿ ವಿನಂತಿ ಮಾಡಲಾಗಿದೆ ಎಂದು ಅವರು ಹೇಳಿದರು.

ADVERTISEMENT

‘ಕರ್ನಾಟಕದ ಜಿಎಸ್‌ಟಿ ಪರಿಹಾರ ಮೊತ್ತದಲ್ಲಿ ₹8,500 ಕೋಟಿ ಇತ್ತೀಚೆಗೆ ಬಿಡುಗಡೆಯಾಗಿದೆ. ಉಳಿದ ಮೊತ್ತವನ್ನು ತ್ವರಿತಗತಿಯಲ್ಲಿ ಬಿಡುಗಡೆ ಮಾಡುವಂತೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಅವರು ತಿಳಿಸಿದರು.

27ಕ್ಕೆ ಮಧ್ಯಂತರ ವರದಿ: ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಜಿಎಸ್‌ಟಿಯ ಸಚಿವರ ಗುಂಪಿನ ಸಭೆ ಕರ್ನಾಟಕ ಭವನದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ರಾಜ್ಯಗಳ ಸಚಿವರು, ಕರ್ನಾಟಕ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತೆ ಸಿ.ಶಿಖಾ ಸೇರಿ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

ಹಲವು ಅಗತ್ಯವಸ್ತುಗಳ ಜಿಎಸ್‌ಟಿ ದರ ಶೇ 18, ಶೇ 12 ಇದೆ. ಅವುಗಳನ್ನು ಕ್ರಮವಾಗಿ ಶೇ 12 ಹಾಗೂ ಶೇ 5ಕ್ಕೆ ಇಳಿಸುವ ಬಗ್ಗೆ ಸಮಾಲೋಚಿಸಲಾಯಿತು. ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌ಗೆ ಶಿಫಾರಸು ಮಾಡಲು
ನಿರ್ಧರಿಸಲಾಯಿತು.

‘ಜಿಎಸ್‌ಟಿ ಕೌನ್ಸಿಲ್‌ನ ಸಭೆ ಇದೇ 27 ಹಾಗೂ 28ರಂದು ನಡೆಯಲಿದೆ. ಸಮಿತಿಯ ಮಧ್ಯಂತರ ವರದಿಯನ್ನು ಸಭೆಗೆ ಮುನ್ನ ಸಲ್ಲಿಸಲಾಗುವುದು’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯದಲ್ಲಿ ಕಟ್ಟೆಚ್ಚರ: ‘ಅಗ್ನಿಪಥ ಯೋಜನೆಯಡಿ ಗರಿಷ್ಠ ವಯೋಮಿತಿಯನ್ನು 21 ವರ್ಷದಿಂದ 23ಕ್ಕೆ ಏರಿಸಿರುವುದು ಶ್ಲಾಘನೀಯ. ಆದರೆ, ಇಂತಹ ಉತ್ತಮ ಯೋಜನೆಯನ್ನು ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಕರ್ನಾಟಕದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸು
ವಂತೆ ಡಿಜಿಪಿ, ಎಡಿಜಿಪಿ (ಕಾನೂನು ಸುವ್ಯವಸ್ಥೆ) ಹಾಗೂ ಬೆಂಗಳೂರು ನಗರ ಪೊಲೀಸ್‌ ಕಮಿಷನರ್ ಅವರಿಗೆ ನಿರ್ದೇಶನ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.