ADVERTISEMENT

ಕೆಲಸವೇ ಆಗುತ್ತಿಲ್ಲ: ಬಿ.ಎಸ್.ಯಡಿಯೂರಪ್ಪಗೆ ಜನಪ್ರತಿನಿಧಿಗಳ ಅಹವಾಲು

ಕೈ ಚೆಲ್ಲುವ ಸಚಿವರು: ಶಾಸಕರಿಂದ ಸಿ.ಎಂಗೆ ದೂರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 20:23 IST
Last Updated 25 ಮಾರ್ಚ್ 2021, 20:23 IST
ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಮುರುಗೇಶ ನಿರಾಣಿ, ಬಿ.ಶ್ರೀರಾಮುಲು, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕರು
ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಮುರುಗೇಶ ನಿರಾಣಿ, ಬಿ.ಶ್ರೀರಾಮುಲು, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತು ಶಾಸಕರು   

ಬೆಂಗಳೂರು: ‘ಕೆಲವು ಸಚಿವರು ನಮ್ಮ ಕೆಲಸ ಮಾಡಿಕೊಡುತ್ತಿಲ್ಲ. ಕಡತಗಳನ್ನೂ ತಡೆ ಹಿಡಿದಿದ್ದಾರೆ. ಅವರನ್ನು ಕೇಳಲು ಹೋದರೆ ‘ನಿಮ್ಮ ಮುಖ್ಯಮಂತ್ರಿ ಜತೆಗೇ ಮಾತನಾಡ್ರಿ’ ಎನ್ನುತ್ತಾರೆ’ ಎಂದು ಬಿಜೆಪಿಯ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ದೂರಿದ್ದಾರೆ.

‘ಆರ್ಥಿಕ ಇಲಾಖೆಯು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಅನುದಾನ ನೀಡಿದ್ದರೂ ಗ್ರಾಮೀಣಾಭಿವೃದ್ಧಿ ಸಚಿವರು(ಕೆ.ಎಸ್‌. ಈಶ್ವರಪ್ಪ) ಅದನ್ನು ತಡೆ ಹಿಡಿದಿದ್ದಾರೆ. ನಿಮ್ಮ ಪರಮಾಧಿಕಾರವನ್ನು ಬಳಸಿ ನೇರವಾಗಿ ಅನುದಾನ ಬಿಡುಗಡೆ ಮಾಡಿಸಬೇಕು’ ಎಂದು ಶಾಸಕರು ಒತ್ತಾಯಿಸಿದ್ದಾಗಿ ಗೊತ್ತಾಗಿದೆ.

ಆರೋಗ್ಯ, ಸಣ್ಣ ನೀರಾವರಿ, ಸಮಾಜಕಲ್ಯಾಣ, ಲೋಕೋಪಯೋಗಿ ಮತ್ತುಇತರ ಇಲಾಖೆಗಳ ಬಗ್ಗೆಯೂ ಶಾಸಕರು ಮುಖ್ಯಮಂತ್ರಿಯವರ ಜತೆ ತಮ್ಮ ಅಹವಾಲು ತೋಡಿಕೊಂಡರು. ‘ಕೃಷ್ಣಾ’ದಲ್ಲಿ ನಡೆದ ಸಭೆಯಲ್ಲಿ ಸುಮಾರು 60 ಶಾಸಕರು ಭಾಗವಹಿಸಿದ್ದರು.

ADVERTISEMENT

ಶಾಸಕರು ಆಕ್ರೋಶದಿಂದ ಮಾತನಾಡಿದರೂ ಸಚಿವ ಸಂಪುಟದ ಸಹದ್ಯೋಗಿಗಳನ್ನು ಬಿಟ್ಟುಕೊಡದ ಯಡಿಯೂರಪ್ಪ, ‘ಭಾವೋದ್ವೇಗದ ಕಾರಣ ಇಂತಹ ಪ್ರತಿಕ್ರಿಯೆ ಬಂದಿದೆ. ಸಚಿವರ ಬಗ್ಗೆ ಯಾವುದೇ ಶಾಸಕರು ಅಪಾರ್ಥ ಮಾಡಿಕೊಳ್ಳುವುದು ಬೇಡ. ಸಂಬಂಧಿಸಿದ ಸಚಿವರ ಜತೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತೇನೆ’ ಎಂದು ಅವರು ಭರವಸೆ ನೀಡಿದರು.

‘ಎಲ್ಲ ಶಾಸಕರು ಮತ್ತು ಸಚಿವರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ನನ್ನದು. ನನ್ನ ಮೇಲೆ ವಿಶ್ವಾಸವಿಡಿ ಎಂದು ಶಾಸಕರನ್ನು ಸಮಾಧಾನಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

‘ಇವೆಲ್ಲ ನಾಲ್ಕು ಗೋಡೆಗಳ ಮಧ್ಯೆ ಪರಾಮರ್ಶೆ ನಡೆದರೆ ಸರ್ಕಾರ ಮತ್ತು ಪಕ್ಷಕ್ಕೆ ಆಗುವ ಮುಜುಗರ ತಪ್ಪುತ್ತದೆ’ ಎಂದೂ ಹೇಳಿದರು.

ವಿವಿಧ ಶಾಸಕರ ಪ್ರಸ್ತಾವನೆಗಳು, ಮಂಜೂರಾದ ಬಳಿಕ ಸಂಬಂಧಿಸಿದ ಕಡತಗಳು ಯಾವ ಹಂತದಲ್ಲಿವೆ, ಅನುದಾನ ಬಿಡುಗಡೆ ಕುರಿತು ಸಭೆಯಲ್ಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಶಾಸಕರಿಗೆ ಆ ಕುರಿತ ವಿವರಗಳನ್ನು ನೀಡಿದರು.

‘ಬೇಸಿಗೆ ಕಾಲಿಟ್ಟಿರುವುದರಿಂದ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತು ನೀಡಬೇಕು’ ಎಂದು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

‘ನನೆಗುದಿಗೆ ಬಿದ್ದಿರುವ ಕಡತಗಳು ಮತ್ತು ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಲು ಹಣಕಾಸು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಯಾವ ಅಧಿಕಾರಿಗೆ ಏನು ಜವಾಬ್ದಾರಿ ನೀಡಬೇಕು ಎಂಬುದು ಗೊತ್ತಿದೆ. ಎಲ್ಲ ಅಧಿಕಾರಿಗಳಿಗೂ ಕಾಲ ಮಿತಿ ನಿಗದಿ ಮಾಡಿ, ಆಡಳಿತಕ್ಕೆ ಚುರುಕು ಮುಟ್ಟಿಸುತ್ತೇನೆ’ ಎಂದು ಯಡಿಯೂರಪ್ಪ ಶಾಸಕರಿಗೆ ಭರವಸೆ ನೀಡಿದರು.

ಕೊರೋನಾ ಕಾರಣ ಆರ್ಥಿಕ ಸಂಕಷ್ಟದಿಂದ ಬಹಳಷ್ಟು ಇಲಾಖೆಗಳ ಅನುದಾನ ಕಡಿತವಾಗಿದೆ. ಇದರ ಪರಿಣಾಮ ಕಾಮಗಾರಿಗಳ ಅನುಷ್ಠಾನ ತಡವಾಗಿದೆ. ಆರ್ಥಿಕ ಪರಿಸ್ಥಿತಿ ಚೇತರಿಕೆ ಆಗುತ್ತಿದ್ದು, ಹಂತ ಹಂತವಾಗಿ ಮಂಜೂರು ಮಾಡಿದ ಅನುದಾನ ಬಿಡುಗಡೆ ಆಗಲಿದೆ. ಶಾಸಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.