ಬೆಂಗಳೂರು: ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಈ ಸಂಬಂಧ ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್.ಕೇಶವಪ್ರಸಾದ್ ಸಲ್ಲಿಸಿರುವ ಖಾಸಗಿ ದೂರನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ 42ನೇ ಎಸಿಎಂಎಂ ಕೋರ್ಟ್ ವಿಚಾರಣೆಗೆ ಅಂಗೀರಿಸಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನ್ಯಾಯಾಲಯಕ್ಕೆ ಖುದ್ದು ಹಾಜರಾದರು. ಆರೋಪಿಗಳ ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು ಇಬ್ಬರಿಗೂ ತಲಾ ₹5 ಸಾವಿರ ನಗದು ಶ್ಯೂರಿಟಿ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದರು. ಬಾಂಡ್ ಪತ್ರಗಳಿಗೆ ಸಹಿ ಹಾಕಿದ ನಂತರ ಇಬ್ಬರೂ ಆರೋಪಿಗಳು ಕೆಲ ಹೊತ್ತು ಕೋರ್ಟ್ ಹಾಲ್‌ನ ಹೊರಗಡೆಯ ಬೆಂಚ್‌ನಲ್ಲಿ ಕುಳಿತು ಸ್ನೇಹಿತರನ್ನು ಮಾತನಾಡಿಸಿ ಅಲ್ಲಿಂದ ತೆರಳಿದರು.
ಪ್ರಕರಣವೇನು?: ‘2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮತ್ತು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ 2023ರ ಮೇ 5ರಂದು ಜಾಹೀರಾತು ನೀಡಿ, ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್ ಸರ್ಕಾರ. ಇದು ಕಳೆದ ನಾಲ್ಕು ವರ್ಷಗಳಲ್ಲಿ ₹ 1.50 ಲಕ್ಷ ಕೋಟಿ ಲೂಟಿ ಹೊಡೆದಿರುವ ಭ್ರಷ್ಟ ಸರ್ಕಾರ’ ಎಂದು ಆರೋಪಿಸಿದ್ದರು. ‘ಈ ಆರೋಪಕ್ಕೆ ಫಿರ್ಯಾದುದಾರರೇ ಇಲ್ಲ. ಇದು ರಾಷ್ಟ್ರೀಯ ಪಕ್ಷವೊಂದರ ವಿರುದ್ಧ ಮಾಡಲಾಗಿರುವ ಆಧಾರ ರಹಿತ, ಪೂರ್ವಗ್ರಹ ಪೀಡಿತ ಮತ್ತು ಮಾನಹಾನಿಕರ ಆರೋಪ’ ಎಂದು ಈ ಖಾಸಗಿ ದೂರು ದಾಖಲಿಸಲಾಗಿದೆ.
ಸಿದ್ದರಾಮಯ್ಯ ಪರ ಹೈಕೋರ್ಟ್ ವಕೀಲ ಸೂರ್ಯ ಮುಕುಂದರಾಜ್, ಡಿ.ಕೆ.ಶಿವಕುಮಾರ್ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್.ಎ.ಅಹಮದ್, ಸಿ.ಆರ್.ದೀಪು ಹಾಗೂ ಕಾಂಗ್ರೆಸ್ ಪಕ್ಷದ ಪರ ಸಂಜಯ ಯಾದವ್ ವಾದ ಮಂಡಿಸಿದರು.
ರಾಹುಲ್ ಗೈರು: ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಆರೋಪಿ. ಎರಡನೇ ಆರೋಪಿ ಡಿ.ಕೆ.ಶಿವಕುಮಾರ್. ಮೂರನೇ ಆರೋಪಿ ಸಿದ್ದರಾಮಯ್ಯ ಹಾಗೂ ನಾಲ್ಕನೇ ಆರೋಪಿಯಾಗಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಇದ್ದಾರೆ.
ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲ ನಿಶಿತ್ ಶೆಟ್ಟಿ, ‘ಇವತ್ತು ಮಧ್ಯಾಹ್ನ ಇಂಡಿಯಾ ಮೈತ್ರಿಕೂಟದ ಸಭೆ ಇರುವ ಕಾರಣ ಅರ್ಜಿದಾರರ ಹಾಜರಿಗೆ ವಿನಾಯ್ತಿ ನೀಡಬೇಕು’ ಎಂದು ಕೋರಿದರು.
ಇದಕ್ಕೆ ಫಿರ್ಯಾದುದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ವಿನಾಯ್ತಿ ನೀಡುವ ಬಗ್ಗೆ ಮಧ್ಯಾಹ್ನ ತೀರ್ಮಾನ ಮಾಡುವುದಾಗಿ ಹೇಳಿ ವಿಚಾರಣೆ ಮುಂದೂಡಿದರು. ಮಧ್ಯಾಹ್ನ ರಾಹುಲ್ ಗಾಂಧಿ ಪರ ವಕೀಲರು ಸಲ್ಲಿಸಿದ್ದ ಸಿಆರ್‌ಪಿಸಿ 205ರ ಅಡಿಯಲ್ಲಿನ ಅರ್ಜಿಯನ್ನು ಮಾನ್ಯ ಮಾಡಿ ಹಾಜರಿಗೆ ವಿನಾಯ್ತಿ ನೀಡಿದರು. ಅಂತೆಯೇ ಇದೇ 7ರಂದು ಖುದ್ದು ಹಾಜರಾಗುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದರು.
‘ನಾವು ನಮ್ಮ ಶಕ್ತಿ ತೋರಿಸುತ್ತೇವೆ’
ಬೆಂಗಳೂರು: ‘ಇಡೀ ದೇಶದಲ್ಲೇ ಕರ್ನಾಟಕ ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ. ತಮ್ಮ ಭ್ರಷ್ಟಾಚಾರವನ್ನು ಬಯಲು ಮಾಡಲು ಅವರೇ ಕರೆಯುತ್ತಿದ್ದಾರೆ. ನಾವು ನಮ್ಮ ಶಕ್ತಿ ತೋರಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಮ್ಮ ಜಾಹೀರಾತುಗಳ ಬಗ್ಗೆ ಬಿಜೆಪಿಯವರು ದೂರು ನೀಡಿದ್ದಾರೆ. ನಾವು ಸುಮ್ಮನೆ ಜಾಹೀರಾತು ನೀಡಿಲ್ಲ. ಬಿಜೆಪಿ ನಾಯಕರ, ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿನ ವರದಿ ಆಧರಿಸಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಜಾಹೀರಾತು ನೀಡಿದ್ದೆವು. ಇದನ್ನೆಲ್ಲಾ ನಾವು ಸಾಬೀತು ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.