ಬೆಳಗಾವಿ: ‘ಪಂಚಮಸಾಲಿ ಸಮುದಾಯಕ್ಕೆ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ್ದ ‘2ಡಿ’ ಮೀಸಲಾತಿ ಕುರಿತು ನ್ಯಾಯಾಲಯದ ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದ ಜತೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಅಧಿವೇಶನ ಮುಗಿದ ಬಳಿಕ ಪಂಚಮಸಾಲಿ ಸಮುದಾಯದ ‘2ಎ’ ಮೀಸಲಾತಿ ಬೇಡಿಕೆ ಕುರಿತು ಕಾನೂನು ತಜ್ಞರು, ಹಿಂದುಳಿದ ವರ್ಗಗಳ ಆಯೋಗ, ಅಡ್ವೊಕೇಟ್ ಜನರಲ್ ಅವರಿಂದ ಅಭಿಪ್ರಾಯ ಪಡೆದ ಬಳಿಕ ಪಂಚಮಸಾಲಿ ಮುಖಂಡರ ಸಭೆ ಕರೆಯಲಾಗುವುದು’ ಎಂದರು.
‘ಹಿಂದಿನ ಸರ್ಕಾರ ಪಂಚಮಸಾಲಿ ಸೇರಿದಂತೆ ಲಿಂಗಾಯತ ಉಪ ಜಾತಿಗಳನ್ನು ‘2ಡಿ’ಗೆ ಸೇರಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ. ಒಂದು ವೇಳೆ ಮೀಸಲಾತಿ ತಿರಸ್ಕೃತವಾದರೆ ಯಾವ ರೀತಿ ಅನುಕೂಲ ಮಾಡಬಹುದು ಎಂದು ಚರ್ಚಿಸಿ, ನಿರ್ಧರಿಸಲಾಗುವುದು’ ಎಂದು ಹೇಳಿದರು.
ಬಿಜೆಪಿ ಸರ್ಕಾರ ಇದೇ ವರ್ಷದ ಆರಂಭದಲ್ಲಿ ಹಿಂದುಳಿದ ವರ್ಗಗಳ ‘ಪ್ರವರ್ಗ 2ಬಿ’ಗೆ (ಮುಸ್ಲಿಂ ಮತ್ತು ಅದರಲ್ಲಿರುವ ಉಪ ಜಾತಿಗಳು) ನೀಡಿದ್ದ ಮೀಸಲಾತಿಯನ್ನು ತೆಗೆದು, ಒಕ್ಕಲಿಗರಿರುವ ‘ಪ್ರವರ್ಗ 3ಎ’ ಮತ್ತು ಪಂಚಮಸಾಲಿ ಲಿಂಗಾಯತರಿರುವ ‘ಪ್ರವರ್ಗ 3ಬಿ’ಗೆ ತಲಾ ಶೇ 2ರಂತೆ ಹಂಚಿತ್ತು.
ಮುಖ್ಯಮಂತ್ರಿ ಜತೆ ನಡೆದ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಬಿ.ಆರ್ .ಪಾಟೀಲ, ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ ಯತ್ನಾಳ್, ವಿನಯ್ ಕುಲಕರ್ಣಿ, ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಪಂಚಮಸಾಲಿ ಸಮುದಾಯದ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.