ನವದೆಹಲಿ: ಕೆಫೆ ಕಾಫಿ ಡೇ ಸಮೂಹದ ಮಾಲೀಕರಾಗಿದ್ದ ವಿ.ಜಿ. ಸಿದ್ಧಾರ್ಥ ಅವರ ಮಾಲೀಕತ್ವದಲ್ಲಿದ್ದ ಮೈಸೂರು ಅಮಾಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ (ಎಂಎಸಿಇಎಲ್) ಕಂಪನಿಯು, ಕಾಫಿ ಡೇ ಎಂಟರ್‌ಪ್ರೈಸಸ್‌ನ (ಸಿಡಿಇಎಲ್) ಅಂಗಸಂಸ್ಥೆಗಳಿಗೆ ಒಟ್ಟು ₹3,535 ಕೋಟಿ ಬಾಕಿ ಇರಿಸಿಕೊಂಡಿದೆ ಎಂಬುದು ಸಿದ್ಧಾರ್ಥ ಅವರ ಆತ್ಮಹತ್ಯೆ ಕುರಿತು ನಡೆದ ತನಿಖೆಯಿಂದ ಬಹಿರಂಗವಾಗಿದೆ.
ಸಿದ್ಧಾರ್ಥ ಅವರ ಸಾವಿಗೆ ಆದಾಯ ತೆರಿಗೆ ಇಲಾಖೆಯ ಕಿರುಕುಳ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ, ಸಿಬಿಐನ ಮಾಜಿ ಉಪ ಮಹಾ ನಿರ್ದೇಶಕ ಅಶೋಕ್ ಕುಮಾರ್ ಮಲ್ಹೋತ್ರ ಅವರ ನೇತೃತ್ವದಲ್ಲಿ ನಡೆದ ತನಿಖೆಯು ಆದಾಯ ತೆರಿಗೆ ಇಲಾಖೆಗೆ ಕ್ಲೀನ್ ಚಿಟ್ ನೀಡಿದೆ.
ಎಂಎಸಿಇಎಲ್ ನೀಡಬೇಕಿದ್ದ ಈ ಮೊತ್ತದಲ್ಲಿ ಒಟ್ಟು ₹ 842 ಕೋಟಿಯ ಬಗ್ಗೆ ಮಾತ್ರ 2019ರ ಮಾರ್ಚ್ 31ರವರೆಗಿನ ಲೆಕ್ಕಪತ್ರಗಳಲ್ಲಿ ಉಲ್ಲೇಖವಿದೆ ಎಂದು ತನಿಖಾ ತಂಡ ಹೇಳಿದೆ.
ಎಂಎಸಿಇಎಲ್‌ನಿಂದ ಬರಬೇಕಿರುವ ಮೊತ್ತವನ್ನು ವಸೂಲು ಮಾಡಲು ಪ್ರಯತ್ನಗಳು ನಡೆದಿವೆ ಎಂದು ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ (ಸಿಡಿಇಎಲ್) ಹೇಳಿದೆ. ವಸೂಲಾತಿಗೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಸೂಚಿಸಲು, ಆ ಕ್ರಮಗಳ ಕುರಿತು ಮೇಲ್ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯನ್ನು ನೇಮಿಸಲು ಕಂಪನಿಯ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ ಎಂದೂ ಸಿಡಿಇಎಲ್ ಹೇಳಿದೆ.
ಸಿದ್ಧಾರ್ಥ ಅವರ ಒಡೆತನದಲ್ಲಿದ್ದ ಷೇರುಗಳನ್ನು ಮತ್ತು ಅವರ ಖಾಸಗಿ ಆಸ್ತಿಯನ್ನು ಅಡವಾಗಿಟ್ಟು, ಕಂಪನಿಗೆ ಹಾಗೂ ಅದರ ಅಂಗಸಂಸ್ಥೆಗಳಿಗೆ ಸಾಲ ಪಡೆಯಲಾಗಿದೆ ಎಂದೂ ಸಿಡಿಇಎಲ್ ತಿಳಿಸಿದೆ. ಸಿದ್ಧಾರ್ಥ ಅವರು 2019ರ ಜುಲೈ 27ರಂದು ಒಂದು ಪತ್ರ ಬರೆದಿದ್ದರು. ಆ ಪತ್ರದಲ್ಲಿ ಅವರು ಆಡಿದ್ದ ಕೆಲವು ಮಾತುಗಳ ಬಗ್ಗೆ ತನಿಖೆ ನಡೆಸಲು ಮಲ್ಹೋತ್ರ ಅವರನ್ನು ಕಂಪನಿಯ ಆಡಳಿತ ಮಂಡಳಿಯು 2019ರ ಆಗಸ್ಟ್ 30ರಂದು ನೇಮಕ ಮಾಡಿತ್ತು.
‘ಎಂಎಸಿಇಎಲ್ ಎಂಬುದು ಸಿದ್ಧಾರ್ಥ ಅವರ ಖಾಸಗಿ ಕಂಪನಿ. ಇದು ಸಿಡಿಇಎಲ್‌ನ ಅಂಗಸಂಸ್ಥೆಗಳ ಜೊತೆ ನಿರಂತರ ಸಂಬಂಧ ಹೊಂದಿತ್ತು. ಈ ಅಂಗಸಂಸ್ಥೆಗಳು ಎಂಎಸಿಇಎಲ್‌ಗೆ ಸಾಲ ನೀಡಿದ್ದವು. ಈ ಮೊತ್ತವನ್ನು ಬ್ಯಾಂಕ್ ಮೂಲಕವೇ ನೀಡಲಾಗಿತ್ತು’ ಎಂದು ತನಿಖಾ ತಂಡ ಹೇಳಿದೆ.
ಸಿಡಿಇಎಲ್‌ನಿಂದ ಪಡೆದ ಹಣ ಷೇರುಗಳ ಮರುಖರೀದಿಗೆ, ಕೆಲವು ಸಾಲಗಳನ್ನು ತೀರಿಸಲು, ಕೆಲವು ಖಾಸಗಿ ಹೂಡಿಕೆಗಳಿಗೆ ಬಳಕೆಯಾಗಿರಬಹುದು. ಅವು ಈ ತನಿಖೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಂಡ ಹೇಳಿದೆ. ಆದಾಯ ತೆರಿಗೆ ಇಲಾಖೆಯ ಕಡೆಯಿಂದ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶ ಇಲ್ಲದೆ ಕಿರುಕುಳ ಉಂಟಾಗಿತ್ತು ಎಂದು ಹೇಳಲು ಯಾವುದೇ ದಾಖಲೆ ನೀಡಿಲ್ಲ ಎಂದೂ ತಂಡ ಹೇಳಿದೆ.
‘ಹೀಗಿದ್ದರೂ, ಆದಾಯ ತೆರಿಗೆ ಇಲಾಖೆಯವರು ಮೈಂಡ್ ಟ್ರೀ ಕಂಪನಿಯ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡ ನಂತರ, ಹಣ
ಕಾಸಿನ ಕೊರತೆ ಎದುರಾಗಿದ್ದಿರಬಹುದು ಎಂಬುದನ್ನು ಹಣಕಾಸಿನ ದಾಖಲೆಗಳು ಹೇಳುತ್ತಿವೆ’ ಎಂದು ತಂಡ ತಿಳಿಸಿದೆ.
‘ಸಿದ್ಧಾರ್ಥ ಅವರ ಖಾಸಗಿ ಕಂಪನಿಗಳ ಜೊತೆಗಿನ ವಹಿವಾಟಿನ ಕುರಿತು ವರದಿ ಉಲ್ಲೇಖಿಸಿದೆ. ಈ ವಿಚಾರದಲ್ಲಿ ಮಾಡಬೇಕಾದ ಕೆಲಸಗಳು ಹಾಗೂ ಜವಾಬ್ದಾರಿಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ಮುಂದಿನ ಕ್ರಮಗಳ ವಿಚಾರವಾಗಿ, ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳ ಜೊತೆ ಸಹಕರಿಸುತ್ತೇನೆ’ ಎಂದು ಸಿಡಿಇಎಲ್ ನಿರ್ದೇಶಕಿ, ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.