ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ಭರವಸೆ ಕಳೆದುಕೊಂಡ ಬಳಿಕವೂ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವ ಪ್ರಕ್ರಿಯೆಯನ್ನು ಮತ್ತಷ್ಟು ಕಾಲ ಮುಂದೂಡಲು ಮೈತ್ರಿ ನಾಯಕರು ಯತ್ನಿಸುತ್ತಿದ್ದು, ಸುಪ್ರೀಂಕೋರ್ಟ್ ನೆರವು ಸಿಗುವ ‘ವಿಶ್ವಾಸ’ದಲ್ಲಿದ್ದಾರೆ.
ಸೋಮವಾರ ರಾತ್ರಿ 11.45ರವರೆಗೂ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ‘ವಿಶ್ವಾಸಮತ ಯಾಚನೆಗೆಮಂಗಳವಾರ ರಾತ್ರಿ 8 ಗಂಟೆಯವರೆಗೆ ಸಮಯ ಕೊಡಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿಕೊಂಡರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಎಷ್ಟೇ ವಿಳಂಬವಾದರೂ ಮಧ್ಯರಾತ್ರಿಯೇ ವಿಶ್ವಾಸಮತ ಸಾಬೀತುಪಡಿಸಲು ಪಟ್ಟು ಹಿಡಿದರು.
ಆದರೆ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರು, ‘ಮಂಗಳವಾರ ಸಂಜೆ 4 ಗಂಟೆಯೊಳಗೆ ಚರ್ಚೆ ಕೊನೆಗೊಳಿಸಬೇಕು, ಯಾವುದೇ ಕಾರಣಕ್ಕೂ ಒಂದು ನಿಮಿಷವೂ ಚರ್ಚೆ ಮುಂದುವರಿಸಲು ಅವಕಾಶ ನೀಡುವುದಿಲ್ಲ.5 ಗಂಟೆಯೊಳಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚರ್ಚೆಯ ಮೇಲಿನ ಉತ್ತರ ನೀಡಬೇಕು, 6 ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆಕೊನೆಗೊಳ್ಳಬೇಕು’ ಎಂದು ಪ್ರಕಟಿಸಿದರು.
ಈ ಮಧ್ಯೆ, ಬಿಜೆಪಿ ಸದಸ್ಯರ ತೀವ್ರ ಆಕ್ಷೇಪದ ನಡುವೆ ಸಭಾಧ್ಯಕ್ಷರು ಕಲಾಪವನ್ನು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಿದರು.
‘ಅನೇಕ ಶಾಸಕರು ಚರ್ಚೆ ಮಾಡಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ. ಹೀಗಾಗಿ ಸೋಮವಾರ ಚರ್ಚೆ ಮುಗಿಸಿ ನಿರ್ಣಯವನ್ನು ಮತಕ್ಕೆ ಹಾಕಿ, ಪ್ರಕ್ರಿಯೆ ಮುಗಿಸಿಬಿಡೋಣ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ನಡೆದ ಕಲಾಪದಲ್ಲಿ ಒಪ್ಪಿಗೆ ಸೂಚಿಸಿದ್ದರು. ಇದನ್ನು ಅನುಮೋದಿಸಿದ್ದ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್, ಕಲಾಪವನ್ನು ಮುಂದೂಡಿದ್ದರು. ‘ಸೋಮವಾರ ಎಲ್ಲವೂ ಮುಗಿದು, ಸರ್ಕಾರ ಪತನವಾಗುವುದು ಖಚಿತ’ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ನಾಯಕರು ತುಟಿಪಿಟಕ್ ಅನ್ನದೇ ಕುಳಿತಿದ್ದರು.
ಐದು ಗಂಟೆಯಾಗುತ್ತಿದ್ದಂತೆ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ, ‘ಸಭಾಧ್ಯಕ್ಷರು ನೀಡಿದ ಭರವಸೆಯನ್ನು ಇಂದಾದರೂ ಈಡೇರಿಸಿ’ ಎಂದು ಕೋರಿದರು. ‘ಇನ್ನೂ ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ, ಮೊದಲ ಬಾರಿಗೆ ಆಯ್ಕೆಯಾದ ನಮಗೂ ಅವಕಾಶ ಕೊಡಿ’ ಎಂದು ಪಟ್ಟು ಹಿಡಿದ ಕಾಂಗ್ರೆಸ್–ಜೆಡಿಎಸ್‌ನ ಶಾಸಕರು ಗದ್ದಲ ಎಬ್ಬಿಸಿದರು. ಅಲ್ಲದೇ, ತಮ್ಮ ಆಸನಗಳನ್ನು ಬಿಟ್ಟು, ವಿಧಾನಸಭೆಯ ಸಭಾಂಗಣದ ಮೊದಲ ಆಸನಗಳ ಬಳಿ ಗಲಾಟೆ ಮಾಡತೊಡಗಿದರು. ಇದರಿಂದಾಗಿ, ಸದನದಲ್ಲಿ ಕೋಲಾಹಲ ಉಂಟಾಯಿತು. ಕಲಾಪವನ್ನು 10 ನಿಮಿಷ ಮುಂದೂಡಲಾಯಿತು.
ಈ ವೇಳೆ ಸಭಾಧ್ಯಕ್ಷರ ಕೊಠಡಿಗೆ ತೆರಳಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಸಚಿವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಂತೆ ಮನವಿ ಮಾಡಿದರು. ಆದರೆ, ಅದಕ್ಕೆ ಸಭಾಧ್ಯಕ್ಷರು ಒಪ್ಪಲಿಲ್ಲ. ಸುಮಾರು ಎರಡು ಗಂಟೆ ಬಳಿಕ ಕಲಾಪ ಆರಂಭವಾಯಿತು. ಆಡಳಿತ ಪಕ್ಷದ ಸದಸ್ಯರು ಮತ್ತೆ ಗಲಾಟೆ ಆರಂಭಿಸಿದರು. ಆಗ, ಎದ್ದು ನಿಂತ ಕುಮಾರಸ್ವಾಮಿ, ಮೈತ್ರಿ ಸದಸ್ಯರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಯಾರೊಬ್ಬರೂ ಅದಕ್ಕೆ ಸೊಪ್ಪು ಹಾಕಲಿಲ್ಲ. ಬಳಿಕ, ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ಎಲ್ಲರನ್ನೂ ಗದರಿ, ತಮ್ಮ ಆಸನಗಳಲ್ಲಿ ಕೂರುವಂತೆ ಮಾಡಿದರು.
‘ಇಡೀ ರಾಜ್ಯದ ಜನರು ನಮ್ಮ ನಡವಳಿಕೆಗಳನ್ನು ನೋಡುತ್ತಿದ್ದಾರೆ. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನಾನು ರಾತ್ರಿ 11 ಗಂಟೆಗೆಯವರೆಗೂ ಇಲ್ಲಿಯೇ ಕೂರುತ್ತೇನೆ. ಯಾರು ಬೇಕಾದರೂ ಚರ್ಚೆ ಮಾಡಿ. ಇವತ್ತೇ ವಿಶ್ವಾಸಮತದ ನಿರ್ಣಯದ ಪ್ರಕ್ರಿಯೆಯನ್ನು ಮುಗಿಸೋಣ’ ಎಂದು ಸಭಾಧ್ಯಕ್ಷರು ಸಲಹೆ ನೀಡಿದರು.
‘ನಾವು ಬೇಡಿಕೆ ಮಂಡಿಸುತ್ತಿರುವುದು ಅದನ್ನೇ. ಇಂದು ಎಷ್ಟು ಹೊತ್ತಾದರೂ ಪ್ರಕ್ರಿಯೆ ಮುಗಿಸಿ’ ಎಂದು ಮಾಧುಸ್ವಾಮಿ ಆಗ್ರಹಿಸಿದರು.
ನಕಲಿ ರಾಜೀನಾಮೆ ಪತ್ರ: ‘ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ’ ಎಂಬ ಪತ್ರ ಹರಿದಾಡಿತು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಕುಮಾರಸ್ವಾಮಿ, ‘ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂಬ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಂತಹ ಸುಳ್ಳು ಸುದ್ದಿಗಳನ್ನು ಯಾರು ಸೃಷ್ಟಿ ಮಾಡುತ್ತಿದ್ದಾರೆ’ ಎಂದು ಪ್ರಸ್ತಾಪಿಸಿದರು.
‘ನಾವು ವಿಶ್ವಾಸ ಮತ ಯಾಚನೆ ಮಾಡಲು ಸಿದ್ಧರಿದ್ದೇವೆ. ಶುಕ್ರವಾರವೇ ಅದನ್ನು ತಿಳಿಸಿದ್ದೆವು. ಆದರೆ, ಇಂದೇ ವಿಶ್ವಾಸ ಮತ ನಿರ್ಣಯವನ್ನು ಮತ ಹಾಕಲು ಸೂಚನೆ ಕೊಡಿ ಎಂದು ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಅರ್ಜಿ ವಿಚಾರಣೆ ಬಾಕಿ ಇದೆ. ಅಲ್ಲಿಯವರೆಗೂ ಅವಕಾಶ ಕೊಡಿ’ ಎಂದು ಕುಮಾರಸ್ವಾಮಿ ಕೋರಿದರು.
ತಕರಾರು ತೆಗೆದು ಬಿಜೆಪಿಯ ಮಾಧುಸ್ವಾಮಿ ಶುಕ್ರವಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದರು. ಊಟದ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಕೂಗಿದರೆ, ಸದನವನ್ನು ಮಂಗಳವಾರಕ್ಕೆ ಮುಂದೂಡಬೇಕು ಎಂದು ಹಲವರು ಆಗ್ರಹಿಸಿದರು.
‘ವಿಶ್ವಾಸ’ದ ಅರ್ಜಿ: ಇಂದು ವಿಚಾರಣೆ
ನವದೆಹಲಿ: ಸೋಮವಾರ (ಜುಲೈ 22) ಸಂಜೆ 5ರೊಳಗೆ ವಿಶ್ವಾಸಮತ ಯಾಚಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸೂಚಿಸುವಂತೆ ಕೋರಿ ಪಕ್ಷೇತರ ಶಾಸಕರು ಸಲ್ಲಿಸಿರುವ ಮೇಲ್ಮನವಿಗಳ ತ್ವರಿತ ವಿಚಾರಣೆಗೆ ಒಪ್ಪದ ಸುಪ್ರೀಂ ಕೋರ್ಟ್, ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಿದೆ.
ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಪರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠದೆದುರು ಹಾಜರಾದ ವಕೀಲ ಮುಕುಲ್ ರೋಹಟಗಿ, ‘ಬಹುಮತ ಕಳೆದುಕೊಂಡಿರುವ ಸರ್ಕಾರ ಕುದುರೆ ವ್ಯಾಪಾರ ಮತ್ತು ಪಕ್ಷಾಂತರ ವಿಷಯ ಪ್ರಸ್ತಾಪಿಸಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಂದೂಡುತ್ತ ಕಾಲಹರಣ ಮಾಡುತ್ತಿದೆ. ಮೇಲ್ಮನವಿಗಳ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು. ಆಗ, ‘ಖಂಡಿತ ಸಾಧ್ಯವಿಲ್ಲ’ ಎಂದು ಹೇಳಿದ ನ್ಯಾಯಮೂರ್ತಿ ಗೊಗೊಯಿ, ‘ಮಂಗಳವಾರ ಈ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬಹುದು’ ಎಂದು ಹೇಳಿದರು.
ಸರ್ಕಾರ ವಜಾ ಮಾಡಲಿ: ಮೈತ್ರಿ ಲೆಕ್ಕ?
ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ನೀಡಿರುವ ನಿರ್ದೇಶನಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ಸಿಗಬಹುದೆಂಬ ನಿರೀಕ್ಷೆಯಲ್ಲಿರುವ ಮೈತ್ರಿ ಕೂಟದ ನಾಯಕರು, ಅದು ಈಡೇರದೇ ಇದ್ದಲ್ಲಿ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೂ ಕಲಾಪ ನಡೆಸುವ ಚಿಂತನೆಯಲ್ಲಿದ್ದಾರೆ.
‘ರಾಜ್ಯಪಾಲರ ನಿರ್ದೇಶನ ಕುರಿತು ಮುಖ್ಯಮಂತ್ರಿ ಸಲ್ಲಿಸಿರುವ ಮೇಲ್ಮನವಿ ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಅದರ ಜತೆಗೆ, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವಂತೆ ಕೋರಿ ಪಕ್ಷೇತರರು ಸಲ್ಲಿಸಿರುವ ಅರ್ಜಿ ವಿಚಾರಣೆಯೂ ನಡೆಯಲಿದೆ. ಎರಡೂ ಅರ್ಜಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಏನು ನಿರ್ದೇಶನ ನೀಡಲಿದೆ ಎಂಬುದರ ಆಧಾರದ ಮೇಲೆ ಮುಂದಿನ ನಡೆ ಇಡೋಣ. ಅಲ್ಲಿಯವರೆಗೂ ಕಲಾಪವನ್ನು ಮುಂದಕ್ಕೆ ತಳ್ಳುವುದು ಸೂಕ್ತ ಎಂಬುದು ಮೈತ್ರಿ ನಾಯಕರ ಲೆಕ್ಕಾಚಾರ’ ಎಂದು ಮೂಲಗಳು ಹೇಳಿವೆ.
‘ಸರ್ಕಾರ ಉಳಿಸಿಕೊಳ್ಳುವ ದಾರಿಗಳು ಇಲ್ಲ. ವಿದಾಯ ಭಾಷಣ ಮಾಡಿ ಹೋಗುವುದಕ್ಕಿಂತ ರಾಷ್ಟ್ರಪತಿ ಆಳ್ವಿಕೆ ಹೇರಿದರೆ ಅದನ್ನು ಬಿಜೆಪಿ ವಿರುದ್ಧ ರಾಜಕೀಯ ಹೋರಾಟದ ಅಸ್ತ್ರವಾಗಿ ಬಳಸುವುದು ಸದ್ಯದ ಚಿಂತನೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
ಧರಣಿಗೆ ಪರಿಷತ್ ಕಲಾಪ ಬಲಿ
ಬೆಂಗಳೂರು: ವಿಧಾನ ಪರಿಷತ್ ಕಲಾಪ ಸೋಮವಾರವೂ ನಡೆಯಲಿಲ್ಲ. ಮತ್ತೆ ಮಂಗಳವಾರಕ್ಕೆ ಮುಂದೂಡಲಾಗಿದ್ದು, ನಾಳೆಯೂ ಕಲಾಪ ನಡೆಯುವುದು ಅನುಮಾನ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಆರನೇ ದಿನವೂ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಲಾಯಿತು.
*ಸಭಾಧ್ಯಕ್ಷರೇ ಸೋಮವಾರ ಚರ್ಚೆ ಮುಗಿಸಿ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುವುದಾಗಿ ಭರವಸೆ ಕೊಟ್ಟಿದ್ದೀರಿ. ಎಷ್ಟು ಹೊತ್ತು ಬೇಕಾದರೂ ಕುಳಿತುಕೊಳ್ಳುತ್ತೇವೆ. ಅದಕ್ಕೆ ಅವಕಾಶ ಮಾಡಿಕೊಡಿ
– ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ
*15 ಶಾಸಕರು ಕೊಟ್ಟಿರುವ ರಾಜೀನಾಮೆ ಬಗ್ಗೆ ಇತ್ಯರ್ಥವಾಗುವವರೆಗೆ ವಿಶ್ವಾಸಮತದ ನಿರ್ಣಯವನ್ನು ಮತಕ್ಕೆ ಹಾಕಿದರೆ ಅದು ಸಿಂಧುವಾಗುವುದಿಲ್ಲ. ಅಲ್ಲಿಯವರೆಗೂ ಮತ ಹಾಕುವುದನ್ನು ಮುಂದೂಡಿ
– ಕೃಷ್ಣ ಬೈರೇಗೌಡ, ಪಂಚಾಯತ್‌ರಾಜ್ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.