ADVERTISEMENT

ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಸೇರ್ಪಡೆಯಾದ ಭವ್ಯಾ ನರಸಿಂಹಮೂರ್ತಿ

ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿ ಸೇರ್ಪಡೆಯಾಗಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2024, 11:08 IST
Last Updated 2 ಜೂನ್ 2024, 11:08 IST
<div class="paragraphs"><p>ಭವ್ಯಾ ನರಸಿಂಹಮೂರ್ತಿ</p></div>

ಭವ್ಯಾ ನರಸಿಂಹಮೂರ್ತಿ

   

X

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಅವರು ಭಾರತೀಯ ಸೇನೆಯ ಮೀಸಲು ಘಟಕವಾದ ಟೆರಿಟೋರಿಯಲ್ ಆರ್ಮಿ ಸೇರ್ಪಡೆಯಾಗಿದ್ದಾರೆ.

ADVERTISEMENT

ಈ ಕುರಿತು ಅವರು ಎಕ್ಸ್‌ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟೆರಿಟೋರಿಯಲ್ ಆರ್ಮಿಯಲ್ಲಿ ಭವ್ಯಾ ಅವರು ಕಮಿಷನ್ಡ್ ಆಫೀಸರ್ ಆಗಿ ಸೇರ್ಪಡೆಯಾಗಿದ್ದಾರೆ.

‘ನಾನು ಭಾರತೀಯ ಸೇನೆಯ ಭಾಗವಾಗುತ್ತಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ಟೆರಿಟೋರಿಯಲ್ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್ ಆಫೀಸರ್ ಆದ ಏಕೈಕ ಮಹಿಳೆ ನಾನಾಗಿದ್ದೇನೆ. ಡಿಜಿಟಿಎ 2022ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ಪಾಸಾದ ಏಕೈಕ ಮಹಿಳೆ ನಾನಾಗಿದ್ದೇನೆ’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಪ್ರಾದೇಶಿಕ ಸೇನೆ ಎಂಥಲೂ ಹೇಳುವ ಟೆರಿಟೋರಿಯಲ್ ಆರ್ಮಿಯಲ್ಲಿ ಎರಡು ವಿಭಾಗಗಳಿವೆ. ಒಂದು, ಡಿಪಾರ್ಟಮೆಂಟಲ್ ಹಾಗೂ ಎರಡನೇಯದ್ದು ನಾನ್ ಡಿಪಾರ್ಟಮೆಂಟಲ್. ಡಿಪಾರ್ಟಮೆಂಟಲ್‌ನಲ್ಲಿ ಭಾರತೀಯ ನಾಗರಿಕ ಸೇವಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈಲ್ವೆಯ ನಿವೃತ್ತರು ಸೇರಿಕೊಳ್ಳಬಹುದು. ನಾನ್ ಡಿಪಾರ್ಟಮೆಂಟಲ್‌ನಲ್ಲಿ ಯಾವುದೇ ಭಾರತೀಯ ನಾಗರಿಕರು ಸೇರಿಕೊಳ್ಳಬಹುದು.

ಭವ್ಯಾ ಅವರು ನಾನ್ ಡಿಪಾರ್ಟಮೆಂಟಲ್‌ ವಿಭಾಗದಿಂದ ಕಮಿಷನ್ಡ್ ಆಫೀಸರ್ ಆಗಿ ನೇಮಕವಾಗಿದ್ದಾರೆ.

ಟೆರಿಟೋರಿಯಲ್ ಆರ್ಮಿ ಸೇರುವವರು ಭಾರತೀಯ ಸೇನೆಗೆ ಅಗತ್ಯ ಬಿದ್ದಾಗ ಸ್ವಯಂಸೇವಕರ ರೀತಿ ಕೆಲಸ ಮಾಡಬೇಕಾಗುತ್ತದೆ. ಇದರಲ್ಲೂ ಸಹ ಕಮಿಷನ್ಡ್ ಹಾಗೂ ನಾನ್ ಕಮಿಷನ್ಡ್ ಎಂಬ ಎರಡು ಹಂತಗಳಿವೆ. ಕಮಿಷನ್ಡ್ ಹುದ್ದೆಗಳು ಅಧಿಕಾರಿ ಹಂತದ ಹುದ್ದೆಗಳದ್ದಾಗಿದ್ದರೆ, ನಾನ್ ಕಮಿಷನ್ಡ್ ಇತರ ಸೇವಾ ಸಿಬ್ಬಂದಿ ಹಂತದ ಹುದ್ದೆಗಳಾಗಿರುತ್ತವೆ. ದೇಶದಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇನೆಯಲ್ಲಿ 40,000 ಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ.

ಈ ಸೇನೆ ಸೇರುವವರು ವರ್ಷದಲ್ಲಿ ಕನಿಷ್ಠ ಎರಡು ತಿಂಗಳು ಸ್ವಯಂಸೇವಕರಾಗಿ ಭಾರತೀಯ ಸೇನೆಯ ಜೊತೆ ಕೆಲಸ ಮಾಡಬಹುದು.

ಕ್ರಿಕೆಟಿಗ ಎಂ.ಎಸ್. ದೋನಿ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಕರ್ನಾಟಕ ಕೇಡರ್‌ನ ಹಿರಿಯ ಐಎಎಸ್ ಅಧಿಕಾರಿ ಕ್ಯಾಫ್ಟನ್ ಮಣಿವಣ್ಣನ್ ಸೇರಿದಂತೆ ಹಲವು ಖ್ಯಾತನಾಮರು ಟೆರಿಟೋರಿಯಲ್ ಆರ್ಮಿಯ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.