ADVERTISEMENT

ರಾಜ್ಯದಲ್ಲಿ ಮೊದಲ ದಿನ 3.80 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೋವ್ಯಾಕ್ಸಿನ್‌ ಲಸಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 13:59 IST
Last Updated 3 ಜನವರಿ 2022, 13:59 IST
ಕೋವಿಡ್‌ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡ ನಂತರ ಫೋಟೊಗೆ ಪೋಸ್‌ ಕೊಟ್ಟ ವಿದ್ಯಾರ್ಥಿಗಳು
ಕೋವಿಡ್‌ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಂಡ ನಂತರ ಫೋಟೊಗೆ ಪೋಸ್‌ ಕೊಟ್ಟ ವಿದ್ಯಾರ್ಥಿಗಳು   

ಬೆಂಗಳೂರು: ಇಂದಿನಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನ ಆರಂಭವಾಗಿದ್ದು, ರಾಜ್ಯದಲ್ಲಿ ಮೊದಲ ದಿನ 3.80 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

ಈ ಕುರಿತು ಟ್ವೀಟಿಸಿರುವ ರಾಜ್ಯದ ಆರೋಗ್ಯ ಇಲಾಖೆ ಆಯುಕ್ತ ಡಿ.ರಣದೀಪ್‌, '15ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭಿಸಲಾಗಿದ್ದು, ನಮ್ಮ ಮುಂಚೂಣಿ ಕಾರ್ಯಕರ್ತರು ಅತ್ಯಂತ ಸಮರ್ಥವಾಗಿ ಕಾರ್ಯಾಚರಿಸಿದ್ದಾರೆ. ಮೊದಲ ದಿನ 3,80,133 ಮಕ್ಕಳಿಗೆ ಲಸಿಕೆ ಹಾಕಲು ಸಾಧ್ಯವಾಗಿದೆ' ಎಂದು ತಿಳಿಸಿದ್ದಾರೆ.

ರಾಜ್ಯದಾದ್ಯಂತ ಮೊದಲ ದಿನ 6,38,891 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ನಿಗದಿ ಪಡಿಸಿಕೊಂಡಿತ್ತು. ಈ ಪೈಕಿ ಶೇಕಡ 59ರಷ್ಟು ಗುರಿ ಸಾಧನೆ ಸಾಧ್ಯವಾಗಿರುವುದು ಪ್ರಕಟಣೆಯಿಂದ ತಿಳಿದು ಬಂದಿದೆ.

ADVERTISEMENT

ಈ ವಯೋಮಾನದ ಮಕ್ಕಳಿಗೆ ಸದ್ಯ 'ಕೋವ್ಯಾಕ್ಸಿನ್' ಲಸಿಕೆ ಮಾತ್ರ ನೀಡಲಾಗುತ್ತಿದೆ. ಮೊದಲ ಡೋಸ್‌ ಪಡೆದ 28 ದಿನದ ನಂತರ ಎರಡನೇ ಡೋಸ್‌ ಲಸಿಕೆ ನೀಡಲಾಗುತ್ತದೆ. 2007ನೇ ಇಸವಿಯಲ್ಲಿ ಅಥವಾ ಅದಕ್ಕೂ ಮೊದಲು ಜನಿಸಿದವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.

ಯಾದಗಿರಿ (ಶೇ 18), ಮೈಸೂರು (ಶೇ 25), ಬೆಂಗಳೂರು ನಗರದಲ್ಲಿ (ಶೇ 27) ಲಸಿಕೆ ವಿತರಣೆಯ ಪ್ರಮಾಣ ಅತಿ ಕಡಿಮೆ ಮಟ್ಟದಲ್ಲಿದ್ದು, ಹಾವೇರಿ (ಶೇ 273), ಧಾರವಾಡ (ಶೇ 225), ಬೆಳಗಾವಿ (ಶೇ 220), ಕೋಲಾರ (ಶೇ 181), ಚಿಕ್ಕಮಗಳೂರು (ಶೇ 136), ಹಾಸನ (ಶೇ 128), ಉತ್ತರ ಕನ್ನಡ (ಶೇ 103) ಹಾಗೂ ಉಡುಪಿಯಲ್ಲಿ (ಶೇ 103) ನಿಗದಿತ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವಿತರಣೆಯಾಗಿದೆ.

ಮಕ್ಕಳ ಪರವಾಗಿ ಪೋಷಕರು ಅಥವಾ ಶಾಲೆಯ ಶಿಕ್ಷಕರು ಅಥವಾ ಮುಖ್ಯ ಶಿಕ್ಷಕರ ಮೊಬೈಲ್‌ ದೂರವಾಣಿ ಸಂಖ್ಯೆ ಮೂಲಕ ನೋಂದಣಿ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.