ADVERTISEMENT

ಕೋವಿಡ್‌: ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ, ಸಭೆ– ರ‍್ಯಾಲಿಗಳಿಗೆ ನಿರ್ಬಂಧ

ಬೆಂಗಳೂರಿನಲ್ಲಿ ಶಾಲೆ ಬಂದ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 19:52 IST
Last Updated 4 ಜನವರಿ 2022, 19:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೇ ಶುಕ್ರವಾರದಿಂದ (ಜ.7) ರಾಜ್ಯದಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಮಂಗಳವಾರ ಒಂದೇ ದಿನ 3,048 ಹೊಸ ಪ್ರಕರಣಗಳು ವರದಿಯಾಗಿವೆ. ಈಗ ಚಾಲ್ತಿಯಲ್ಲಿರುವ ರಾತ್ರಿ ಕರ್ಪ್ಯೂ ನಿಯಮ ಜ.8ಕ್ಕೆ ಕೊನೆಯಾಗಲಿದೆ. ಅದರ ಜತೆಗೆ ಮತ್ತಷ್ಟು ಕಠಿಣ ನಿಯಮಗಳನ್ನು ಹೇರಿರುವ ಸರ್ಕಾರ, ಜ.6ರ ಗುರುವಾರದಿಂದ ಅನ್ವಯವಾಗುವಂತೆ ಮತ್ತೆ ಎರಡು ವಾರಗಳ ಕಾಲ ಹೊಸ ನಿರ್ಬಂಧಗಳನ್ನು ಹೇರಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಸಚಿವರು, ಅಧಿಕಾರಿಗಳು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಮತ್ತು ಆರೋಗ್ಯ ತಜ್ಞರು ಪಾಲ್ಗೊಂಡಿದ್ದರು. ರಾತ್ರಿ 9.30ರವರೆಗೂ ನಡೆದ ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಹೊಸದಾಗಿ ಜಾರಿ ಮಾಡಲಾಗುತ್ತಿರುವ ನಿರ್ಬಂಧಗಳ ಬಗ್ಗೆ ವಿವರ ನೀಡಿದರು.

ಬೆಂಗಳೂರಿನಲ್ಲಿ ಶಾಲೆ ಬಂದ್‌: ಬೆಂಗಳೂರಿನಲ್ಲಿ ಶಾಲೆಗಳು ಗುರುವಾರದಿಂದ ಬಂದ್‌ ಆಗಲಿವೆ. ಆದರೆ, 10,11 ಮತ್ತು 12 ನೇ ತರಗತಿಗಳಿಗೆ ಮಾತ್ರ ಶಾಲೆ–ಕಾಲೇಜುಗಳು ನಡೆಯಲಿವೆ. 1ರಿಂದ 9ರ ವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯಲಿವೆ. ವೈದ್ಯಕೀಯ, ಅರೆ ವೈದ್ಯಕೀಯ, ನರ್ಸಿಂಗ್ ಕಾಲೇಜುಗಳು ಮಾತ್ರ ನಡೆಯಲಿವೆ. ಪದವಿ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭೌತಿಕ ತರಗತಿ ನಡೆಯುವುದಿಲ್ಲ.

ರಾ‌ಜ್ಯದ ಉಳಿದ ಜಿಲ್ಲೆಗಳ ಶಾಲಾ ಕಾಲೇಜಗಳು ಯಥಾರೀತಿ ನಡೆಯಲಿವೆ. ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸಚಿವ ಅಶೋಕ ಹೇಳಿದರು.

ವಾರಾಂತ್ಯ ಕರ್ಫ್ಯೂ: ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗುತ್ತದೆ. ಈ ವೇಳೆ, ಹೊರಜಿಲ್ಲೆ, ರಾಜ್ಯಗಳಿಂದ ಬರುವವರಿಗೆ ವಾಹನಗಳ ಟಿಕೆಟ್ ಇದ್ದರೆ ಅಡ್ಡಿ ಇರುವುದಿಲ್ಲ. ಅನಗತ್ಯ ಓಡಾಟಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ.

ಆದರೆ, ದಿನಸಿ ಅಂಗಡಿ, ಹಾಲು, ತರಕಾರಿ, ಔಷಧ, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ನಿರ್ಬಂಧ ಇರುವುದಿಲ್ಲ. ಕರ್ಫ್ಯೂ ಅವಧಿಯಲ್ಲಿ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆ ಮಾತ್ರ ಇರುತ್ತದೆ ಎಂದು ಸಚಿವ ಅಶೋಕ ಹೇಳಿದರು.

ಬಸ್‌, ರೈಲು, ಮೆಟ್ರೊ, ಆಟೋ ಸೇವೆಗಳಿಗೆ ವಾರದ ದಿನಗಳಲ್ಲಿ ನಿರ್ಬಂಧ ಇರುವುದಿಲ್ಲ.

ರಜಾದಿನ ಬಿಟ್ಟು ವಾರದ ಎಲ್ಲ ದಿನಗಳಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವಂತೆಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಸಿಬ್ಬಂದಿ 50:50 ಅನುಪಾತದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚಿತ್ರ ಮಂದಿರ, ಬಾರ್, ಪಬ್, ರೆಸ್ಟೋರೆಂಟ್‌ಗಳಲ್ಲಿ ಕೂಡ ಒಟ್ಟು ಆಸನ ಸಾಮರ್ಥ್ಯದ ಶೇ 50ರಷ್ಟು ಆಸನಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಕರ್ಫ್ಯೂ ದಿನಗಳಲ್ಲಿ ಪಾರ್ಸೆಲ್‌ ಮಾತ್ರ ಅವಕಾಶ ನೀಡಲಾಗಿದೆ.

ಸಭೆ–ಸಮಾರಂಭ: ಯಾವುದೇ ‍ಪ್ರತಿಭಟನೆ, ಜಾತ್ರೆ, ರ‍್ಯಾಲಿ, ಮೆರವಣಿಗೆಗೆ ಅವಕಾಶ ಇರುವುದಿಲ್ಲ. ಈ ನಿರ್ಬಂಧ ಗುರುವಾರ ರಾತ್ರಿಯಿಂದಲೇ ಜಾರಿಯಾಗಲಿದೆ ಎಂದು ಕೆ.ಸುಧಾಕರ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.