ಬೀದರ್: ‘ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶನಿವಾರ ಕಲಬುರಗಿ ವಿಭಾಗ ಮಟ್ಟದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಅನವಶ್ಯಕ ಚರ್ಚೆ. ಈ ರೀತಿಯ ಚರ್ಚೆಗಳು ಕೆಲವೊಮ್ಮೆ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ ನಡೆಯುತ್ತವೆ. ನಮ್ದು ರಾಷ್ಟ್ರೀಯ ಪಕ್ಷ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಅಂತಹ ಪರಿಸ್ಥಿತಿಯೇ ಉದ್ಭವಿಸಿಲ್ಲ ಎಂದರು.
ಸಿಎಂ ಹುದ್ದೆ ವಿಚಾರವಾಗಿ ಮಾಧ್ಯಮದವರು ಪ್ರಶ್ನೆ ಕೇಳುತ್ತಿರುವುದು ಆಶ್ಚರ್ಯವಾಗುತ್ತಿದೆ. ಸ್ವಾಮೀಜಿಗಳು ಕೂಡ ಇದರ ಬಗ್ಗೆ ಮಾತಾಡುವುದು ಸೂಕ್ತವಲ್ಲ. ಸ್ವಾಮೀಜಿಗಳು ಸಾರ್ವಜನಿಕವಾಗಿ ಮಾತನಾಡುವುದು ಸರಿನಾ ಅಥವಾ ತಪ್ಪಾ ಎನ್ನುವುದು ಅವರೇ ನಿರ್ಧರಿಸಬೇಕು. ಏನಾದರೂ ಇದ್ದರೆ ನಮ್ಮ ಪಕ್ಷದ ವರಿಷ್ಠರ ಬಳಿ ಬಂದು ಮಾತನಾಡಬೇಕು ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ ಅವರಿಗೆ ಒಂದು ಅವಕಾಶ ಕೊಡಿ ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಸ್ವಾಮೀಜಿ ಹೇಳಿದ್ದಾರೆ. ಹೈಕಮಾಂಡ್ ಅದರ ಬಗ್ಗೆ ತೀರ್ಮಾನಿಸುತ್ತದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರು ಬಹಳ ಅನೋನ್ಯವಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಬ್ಬರು ಅನೋನ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ವಿಷಯದಲ್ಲೂ ಭಿನ್ನಾಭಿಪ್ರಾಯ ತಲೆದೋರಿಲ್ಲ. ಸಚಿವರು ರಾಜೀನಾಮೆ ಕೊಡುವ ವಿಚಾರವನ್ನು ಹೈಕಮಾಂಡ್ ಅಥವಾ ಮುಖ್ಯಮಂತ್ರಿ ಹೇಳಬೇಕು. ಸಚಿವರನ್ನು ತೆಗೆದುಕೊಳ್ಳುವುದು, ಬಿಡುವುದು ಸಿಎಂ ವಿವೇಚನೆಗೆ ಬಿಟ್ಟದು. ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದರು.
ಹಾಲು ಜಾಸ್ತಿ ಬರುತ್ತಿದೆ. ರೈತರ ಹಾಲು ಪೂರ್ಣ ಪ್ರಮಾಣದಲ್ಲಿ ಖರೀದಿಸಿ, ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾಲಿನ ಪ್ರಮಾಣ ಹೆಚ್ಚಿಸಿ ದರ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.