ADVERTISEMENT

ವಾರ್ನಿಂಗ್ ನಾನ್ ಕೇಳ್ತೀನೇನ್ರೀ.. ರಾಜಣ್ಣ ರಾಜಣ್ಣಾನೇ: ಸಚಿವ ಕೆ.ಎನ್. ರಾಜಣ್ಣ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 9:32 IST
Last Updated 29 ಜೂನ್ 2024, 9:32 IST
 ಕೆ.ಎನ್ ರಾಜಣ್ಣ
 ಕೆ.ಎನ್ ರಾಜಣ್ಣ   

ಬೆಂಗಳೂರು: ‘ಬಾಯಿಗೆ ಬೀಗ ಎಲ್ಲರೂ ಹಾಕಿಕೊಳ್ಳಬೇಕು. ಎಲ್ಲರೂ ಸುಮ್ಮನೆ ಇದ್ದರೆ ನಾನೂ ಸುಮ್ಮನೆ ಇರುತ್ತೇನೆ’ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡುವವರಿಗೆ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ನೀಡಿರುವ ಅವರು, ‘ನೋಟಿಸ್ ಕೊಡುತ್ತಾರಾ ಕೊಡಲಿ. ಕೊಟ್ಟು ಆದ ಮೇಲೆ ನಾನು ಮಾತನಾಡುತ್ತೇನೆ' ಎಂದರು.

ಸುದ್ದಿಗಾರರ ಜೊತೆ ಮಾತನಾಡಿದ ರಾಜಣ್ಣ, ‘ಅವರು (ಡಿ.ಕೆ. ಶಿವಕುಮಾರ್) ವಿವಾದ ಆಗಬಾರದು ಎಂದು ಆ ರೀತಿ ಹೇಳಿರುತ್ತಾರೆ’ ಎಂದರು.

ADVERTISEMENT

‘ಹಾಗಿದ್ದರೆ, ಹೆಚ್ಚುವರಿ ಡಿಸಿಎಂ ಕೇಳಬಾರದಾ ನಾವು? ಕೇಳಿದರೆ ತಪ್ಪಾಗುತ್ತದೆಯೇ? ವಾರ್ನಿಂಗ್ ನಾನ್ ಕೇಳ್ತೀನೇನ್ರೀ.. ರಾಜಣ್ಣ ರಾಜಣ್ಣಾನೇ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದು ಹೇಳಿದರೆ ಕೇಳಿಕೊಂಡು ಸುಮ್ಮನೆ ಇರಬೇಕಾ?’ ಎಂದು ಪ್ರಶ್ನಿಸಿದರು.

‘ಶಾಮನೂರು ಶಿವಶಂಕರಪ್ಪ ಅವರನ್ನು ಉಪ ಮುಖ್ಯಮಂತ್ರಿ ಮಾಡಿ ಎಂದು ಅವರ ಸ್ವಾಮೀಜಿ ಹೇಳುತ್ತಿದ್ದಾರೆ. ಸತೀಶ ಜಾರಕಿಹೊಳಿ ಅವರನ್ನು ಮಾಡಿ ಎಂದು ಅವರ ಸ್ವಾಮೀಜಿ ಹೇಳುತ್ತಾರೆ. ಸ್ವಾಮೀಜಿಗಳು ಹೇಳುವುದನ್ನು ಕೇಳುವುದಕ್ಕೆ ಆಗುತ್ತದೆಯೇ? ಸ್ವಾಮೀಜಿ ಹೇಳಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ’ ಎಂದರು.

'ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಎಂದಲ್ಲ, ನಾನು ಪ್ರಜಾಪ್ರಭುತ್ವ ಪರವಾಗಿ ಇದ್ದೇನೆ. ಬಡವರ ಪರ ಸಿದ್ದರಾಮಯ್ಯ ಕೆಲಸ ಮಾಡುತ್ತಾರೆ. ಅದಕ್ಕೆ ಅವರ ಜೊತೆ ನಾವಿದ್ದೇವೆ. ಸ್ವಾಮೀಜಿಗಳದ್ದು ಅವರ ಜಾಗ ಅವರದ್ದು’ ಎಂದರು.

ಸಂಸದರಾಗಿ ಡಿ.ಕೆ. ಸುರೇಶ್ ಪರಿಣಾಮಕಾರಿಯಾಗಿ ಕೆಲಸ ಮಾಡಿರುವವರಲ್ಲಿ ಮೊದಲಿಗರು. ಅವರನ್ನು ಯಾರು ಸೋಲಿಸಿದ್ದು? ಇವರೆಲ್ಲ ಸ್ವಾಮೀಜಿಗಳು ಒಂದಾಗಿ ಸೋಲಿಸಿದರು. ದೇವೇಗೌಡರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು' ಎಂದು ಕೆಣಕಿದರು.

ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಶಾಸಕರು, ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸ್ವಾಮೀಜಿಗಳು ಹೇಳಿದಂತೆ ಮಾಡಲು ಆಗುವುದಿಲ್ಲ’ ಎಂದೂ ಹೇಳಿದರು.

ಸ್ಥಾನ ಬಿಟ್ಟುಕೊಡುವಂತೆ ಪ್ರಧಾನಿಯನ್ನೇಕೆ ಕೇಳುವುದಿಲ್ಲ: ಬಿ.ಎಸ್‌. ಶಿವಣ್ಣ

ಬೆಂಗಳೂರು: ‘ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಆಯ್ಕೆಯಾದ ಮುಖ್ಯಮಂತ್ರಿಯ ಬದಲಾವಣೆ ಬಗ್ಗೆ ಪ್ರಶ್ನಿಸುವ ಚಂದ್ರಶೇಖರನಾಥ ಸ್ವಾಮೀಜಿ, ಪ್ರಧಾನಿ ಸ್ಥಾನವನ್ನು ಶೋಭಾ ಕರಂದ್ಲಾಜೆಗೆ ಅಥವಾ ಡಾ.ಸಿ.ಎನ್. ಮಂಜುನಾಥ ಅವರಿಗೆ ಬಿಟ್ಟು ಕೊಡಿ ಎಂದು ಏಕೆ ಕೇಳುವುದಿಲ್ಲ’ ಎಂದು ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್‌. ಶಿವಣ್ಣ ಪ್ರಶ್ನಿಸಿದ್ದಾರೆ.  

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿನೂತನ ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಧಾರವಾಗಿ ನಿಂತಿದ್ದಾರೆ. ಅಂತಹ ಸಂದರ್ಭದಲ್ಲಿ ರಾಜಕಾರಣಕ್ಕೆ ಸಂಬಂಧವೇ ಇಲ್ಲದ ಸ್ವಾಮೀಜಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಮಾತನಾಡುತ್ತಿರುವುದು ಎಷ್ಟು ಸರಿ? ಧಾರ್ಮಿಕ ಮುಖಂಡರಾದ ಶ್ರೀಗಳಿಗೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? 10 ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೂ ಇದೇ ಪ್ರಶ್ನೆ ಕೇಳುವ ಧೈರ್ಯ ಸ್ವಾಮೀಜಿಗೆ ಇದೆಯೇ’ ಎಂದೂ ಕೇಳಿದ್ದಾರೆ. 

‘ತಮ್ಮ ಸಮುದಾಯದ ಮೇಲೆ ಅಷ್ಟೊಂದು ಪ್ರೇಮವಿದ್ದರೆ, ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೂ ಸ್ಥಾನ ಬಿಟ್ಟುಕೊಡುವಂತೆ ಕೇಳಲಿ’ ಎಂದಿದ್ದಾರೆ.

‘ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಷಡ್ಯಂತ್ರ ರೂಪಿಸಿ ಒಕ್ಕಲಿಗರ ಪರ್ಯಾಯ ಮಠದ ಪೀಠಾಧ್ಯಕ್ಷರನ್ನಾಗಿ ಚಂದ್ರಶೇಖರನಾಥ ಸ್ವಾಮೀಜಿ ಅವರನ್ನು ಕುಳ್ಳಿರಿಸಿದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಂತಹ ಸ್ವಾಮೀಜಿಯ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ’ ಎಂದೂ ಹೇಳಿದ್ದಾರೆ.

‘ವಿರೋಧ ಪಕ್ಷದ ನಾಯಕ ಆರ್. ಅಶೋಕ ಕೂಡ ಈ ವಿಚಾರವನ್ನು ಬಳಸಿಕೊಳ್ಳುತ್ತಿರುವುದು ಸಂಸದೀಯ ನಡೆಯಲ್ಲ. ‘ಮರ್ಯಾದೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಾತ್ಮರಾಗಿ ಸ್ಥಾನ ಬಿಟ್ಟುಕೊಡಬೇಕು' ಎಂದು ಅಶೋಕ ಹೇಳಿರುವ ಮಾತಿನಲ್ಲಿ ಗಂಭೀರತೆ ಇಲ್ಲ. ಬಿ.ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಎಚ್.ಡಿ. ಕುಮಾರಸ್ವಾಮಿ ಧರ್ಮಾತ್ಮರಾದರೇ’ ಎಂದೂ ಶಿವಣ್ಣ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.