ADVERTISEMENT

ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿಯ ನೂರಕ್ಕೂ ಹೆಚ್ಚು ಶಾಸಕರು

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 3:36 IST
Last Updated 15 ಜನವರಿ 2019, 3:36 IST
ಬಿ.ಎಸ್‌.ಯಡಿಯೂರಪ್ಪ– ಸಂಗ್ರಹ ಚಿತ್ರ
ಬಿ.ಎಸ್‌.ಯಡಿಯೂರಪ್ಪ– ಸಂಗ್ರಹ ಚಿತ್ರ   

ನವದೆಹಲಿ: ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರ ಹಿಡಿಯಲು ಮತ್ತೊಂದು ಸುತ್ತಿನ 'ಆಪರೇಷನ್ ಕಮಲ'ಕ್ಕೆ ಕೈ ಹಾಕಿರುವ ಬಿಜೆಪಿ, ಎದುರಾಳಿಗಳಿಂದ ಕಾಪಾಡಿಕೊಳ್ಳಲು ತನ್ನ ಶಾಸಕರನ್ನು ದೆಹಲಿ ಬಳಿಯ ಗುರುಗ್ರಾಮದ ಹೋಟೆಲೊಂದಕ್ಕೆ ರವಾನಿಸಿದೆ.

ಇತ್ತೀಚಿನ ರಾಜ್ಯ ಮಂತ್ರಿಮಂಡಲ ಪುನಾರಚನೆಯ ನಂತರ ಸಚಿವ ಸ್ಥಾನ ಕಳೆದುಕೊಂಡ ಶಾಸಕರು ಮತ್ತು ಸ್ಥಾನ ಸಿಗದ ಕೆಲ ಕಾಂಗ್ರೆಸ್- ಜೆಡಿಎಸ್ ಆಕಾಂಕ್ಷಿಗಳಲ್ಲಿ ಅತೃಪ್ತಿ ಭುಗಿಲೆದ್ದಿತ್ತು. ಈ ಅಸಮಾಧಾನವನ್ನು ಬಳಸಿಕೊಳ್ಳುವ ಪ್ರಯತ್ನಗಳು ಬಿಜೆಪಿಯಿಂದ ನಡೆದಿವೆ.

ಆದರೆ ಇಂತಹ ಯಾವುದೇ ಪ್ರಯತ್ನ ನಡೆದಿಲ್ಲವೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಆಮಿಷಗಳಿಗೆ ಬಲಿಬೀಳದಂತೆ ತಮ್ಮ ಪಕ್ಷದ ಶಾಸಕರನ್ನು ಇಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ ಎಂಬ ಗುಟ್ಟು ಅವರ ಬಾಯಿಂದಲೇ ರಟ್ಟಾಯಿತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವ ಸ್ಥಾನ ಮತ್ತು ಹಣದ ಆಮಿಷ ನೀಡಿ ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಅವರು ಪ್ರತ್ಯಾರೋಪ ಮಾಡಿದರು.

ADVERTISEMENT

‘ನಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಇಲ್ಲಿ ಉಳಿದಿದ್ದೇವೆ. ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸಾಗುತ್ತೇವೆ. 'ಆಪರೇಷನ್ ಕಮಲ'ದ ಮಾತುಗಳು ಕೇವಲ ಊಹಾಪೋಹ. ಸರ್ಕಾರ ರಚಿಸಲು ಅಗತ್ಯವಿರುವ ಶಾಸಕ ಸಂಖ್ಯಾಬಲ ನಮ್ಮ ಬಳಿ ಇಲ್ಲ. ಮುಂದಿನ ನಾಲ್ಕೂವರೆ ವರ್ಷ ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದೇವೆ’ ಎಂದರು.

ನಾಲ್ಕು ದಿನಗಳಾದರೂ ಬಿಜೆಪಿ ಶಾಸಕರ ದೆಹಲಿ ವಾಸ ಮುಗಿಯುತ್ತಿಲ್ಲ. ಪಕ್ಷದ ರಾಷ್ಟ್ರೀಯ ಮಂಡಳಿಯ ಸಮಾವೇಶಕ್ಕೆಂದು ಅವರನ್ನು ಗುರುವಾರ ರಾತ್ರಿ ಇಲ್ಲಿಗೆ ಕರೆತರಲಾಗಿತ್ತು. ಶುಕ್ರವಾರ ಮತ್ತು ಶನಿವಾರದ ಸಮಾವೇಶ ಮುಗಿದರೂ ಬೆಂಗಳೂರಿಗೆ ಮರಳಲು ಅವರಿಗೆ ಪಕ್ಷದ ಅನುಮತಿ ದೊರೆತಿಲ್ಲ. ಬಹಳಷ್ಟು ಶಾಸಕರಿಗೆ ದೆಹಲಿ ಬಿಜೆಪಿಯ ತಲಾ ಒಬ್ಬ ಕಾರ್ಯಕರ್ತರನ್ನು 'ಸಹಾಯಕ'ರ ರೂಪದಲ್ಲಿ ಕಾವಲಿಗೆ ನೇಮಿಸಲಾಗಿದೆ. ಪಕ್ಷದ ಹಿರಿಯ ಮತ್ತು ನಿಷ್ಠಾವಂತ ಕಟ್ಟಾಳುಗಳು ಈ 'ಸಹಾಯಕ'ರಿಂದ ಮುಕ್ತರು.

ಹಾಲಿ ಕಾರ್ಯಾಚರಣೆಯು ಮುಖ್ಯವಾಗಿ ಪಕ್ಷದ ರಾಜ್ಯ ನಾಯಕತ್ವವೇ ರೂಪಿಸಿ ಜಾರಿಗೊಳಿಸಿರುವ ಸಾಹಸ. ಸಮ್ಮತಿ ನೀಡಿರುವ ಪಕ್ಷದ ರಾಷ್ಟ್ರೀಯ ನಾಯಕತ್ವವು ಹೆಚ್ಚು ಸಕ್ರಿಯವಾಗಿದ್ದಂತೆ ತೋರಿ ಬಂದಿಲ್ಲ. ಲೋಕಸಭೆ ಚುನಾವಣೆ ಕದ ಬಡಿದಿರುವ ಹೊತ್ತಿನಲ್ಲೇ ತನ್ನ ಭದ್ರಕೋಟೆಗಳೆನಿಸಿದ್ದ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಢವನ್ನು ಕಳೆದುಕೊಂಡ ದೊಡ್ಡ ಹಿನ್ನಡೆಯನ್ನು ರಾಷ್ಟ್ರೀಯ ನಾಯಕತ್ವ ಎದುರಿಸಿದೆ. ಈ ಹಿನ್ನೆಲೆಯಲ್ಲಿ ಆಯಾಚಿತವಾಗಿ ಕರ್ನಾಟಕ ಮರಳಿ ತನ್ನ ವಶವಾದರೆ ಅಲ್ಲಿಂದ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಅನುಕೂಲ ಎಂಬುದು ಪಕ್ಷದ ಆಲೋಚನೆಯಾಗಿದೆ.

’ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಪಕ್ಷವು ಬಿಜೆಪಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಒಂದೆರಡು ದಿನ ದೆಹಲಿಯಲ್ಲಿ ಉಳಿಯಲಿದ್ದೇವೆ’ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ ಎಂಬ ಕಾಂಗ್ರೆಸ್‌ ಆರೋಪ ತಳ್ಳಿ ಹಾಕಿರುವ ಬಿಜೆಪಿ, ’ನಾವು ಸರ್ಕಾರ ರಚಿಸುವ ಯಾವುದೇ ಪ್ರಯತ್ನ ನಡೆಸುತ್ತಿಲ್ಲ’ ಎಂದಿದೆ. ಕಾಂಗ್ರೆಸ್‌ನ ಕೆಲವು ಶಾಸಕರು ಕಾಣೆಯಾಗಿದ್ದು, ಬಿಜೆಪಿ ಆಪರೇಷನ್‌ ಕಮಲ ಕೈಗೊಂಡಿದೆ ಎಂದು ಆರೋಪಿದೆ.

224 ಸ್ಥಾನಗಳ ಕರ್ನಾಟಕ ವಿಧಾನಸಭೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ 118 ಶಾಸಕರ ಬಲ ಹೊಂದಿದೆ. ಸರ್ಕಾರ ರಚನೆಗೆ 113 ಶಾಸಕರ ಬೆಂಬಲ ಬೇಕಿದ್ದು, ಬಿಜೆಪಿ 104 ಶಾಸಕರನ್ನು ಹೊಂದಿದೆ.

’ಕಾಣೆಯಾಗಿರುವ ಕಾಂಗ್ರೆಸ್‌ ಶಾಸಕರು ಮುಂಬೈನ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ. ಆ ಎಲ್ಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಅವರೆಲ್ಲ ಮುಂಬೈಗೆ ತೆರಳಿದ್ದಾರೆ. ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ’ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಾಣೆಯಾಗಿರುವ ಶಾಸಕರು:ರಮೇಶ್‌ ಜಾರಕಿಹೊಳಿ, ಆನಂದ್‌ ಸಿಂಗ್‌, ಬಿ.ನಾಗೇಂದ್ರ, ಉಮೇಶ್‌ ಜಾದವ್‌ ಹಾಗೂ ಬಿ.ಸಿ.ಪಾಟೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.