ಕಲಬುರಗಿ: ‘ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಬಿಜೆಪಿಯವರು ನನ್ನನ್ನು ಸಾಯಿಸಲು ಬಯಸುತ್ತಿದ್ದಾರೆ. ಜನರಿಗಾಗಿ ನಾನು ಸಾಯಲು ಸಿದ್ಧ. ಯಾವುದಕ್ಕೂ ಹೆದರುವುದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಭಾನುವಾರ ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಕನೀಜ್ ಫಾತಿಮಾ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
‘ನಾವು ಸಣ್ಣ, ಪುಟ್ಟ ವಿಚಾರಗಳನ್ನು ಮಾತನಾಡಿದರೆ ನಮಗೆ ನೋಟಿಸ್ ಕೊಟ್ಟು ಧಮ್ಕಿ ಹಾಕುತ್ತಾರೆ. ಬಿಜೆಪಿಯವರು ನನ್ನನ್ನು ಸಾಯಿಸಲು ಇಚ್ಛಿಸಿದ್ದಾರೆ. ನನ್ನ ಇಡೀ ಕುಟುಂಬವನ್ನು ಸಾಫ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಸಾಯಲು ಹುಟ್ಟಿದವರು. ಸಾಯಿಸುವುದಾದರೆ ಸಾಯಿಸಿ, ನಾವು ಸಾಯಲು ಸಿದ್ಧ’ ಎಂದರು.
‘ಭೂಮಿಯ ಮೇಲೆ ಯಾರಾದರೂ 200 ವರ್ಷ ಬದುಕಿದ್ದಾರಾ? ನನಗೆ ಈಗ 81 ವರ್ಷ ವಯಸ್ಸು. ಇನ್ನಷ್ಟು ವರ್ಷಗಳ ಕಾಲ ಬದುಕಿರುತ್ತೇನೆ. ನಾನು ಸಾಯಲು ಹೆದರುವುದಿಲ್ಲ. ಸಂಸತ್ತಿನ ಒಳಗೆ– ಹೊರಗೆ ಜನರಿಗಾಗಿ ಹೋರಾಟ ಮಾಡಿದ್ದೇನೆ, ಮಾಡುತ್ತಿದ್ದೇನೆ, ಮುಂದೆ ಮಾಡುತ್ತೇನೆ. ಒಳ್ಳೆಯ ಕೆಲಸಕ್ಕಾಗಿ ಹೆದರುವುದು ಏಕೆ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.