ಬೆಂಗಳೂರು: ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ ಮತ್ತೆ ಮತದಾನದ ಪ್ರಮಾಣ ಕಡಿಮೆಯಾಗಿದೆ.
ರಾಜ್ಯದಲ್ಲಿನ ಶೇ 73.19 ಪ್ರಮಾಣಕ್ಕೆ ಹೋಲಿಸಿದರೆ, ಶೇ 18.19 ರಷ್ಟು ಕಡಿಮೆಯಾಗಿದೆ. ಆದರೆ, ಆರು ವಿಧಾನಸಭೆ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಒಟ್ಟಾರೆ ಶೇಕಡಾವಾರು ಲೆಕ್ಕಾಚಾರದಲ್ಲೂ ಮಹಿಳೆಯರು ಮುಂದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಶೇ 55.12ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 55ರಷ್ಟು ಮತದಾನವಾಗಿದೆ. ಶೇ 56.23ರಷ್ಟು ಮಹಿಳೆಯರು, ಶೇ 53.87 ಪುರುಷರು ಹಕ್ಕು ಚಲಾವಣೆ ಮಾಡಿದ್ದಾರೆ.
ರಾಜರಾಜೇಶ್ವರಿನಗರ, ಶಾಂತಿನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಪುಲಕೇಶಿನಗರ, ಯಶವಂತಪುರ ವಿಧಾನಸಭೆ ಕ್ಷೇತ್ರಗಳಲ್ಲಿ ನಡೆದಿರುವ ಮತದಾನದಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರು ಹೆಚ್ಚಾಗಿ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಪುಲಕೇಶಿ ನಗರದ ಕ್ಷೇತ್ರದಲ್ಲಿ ಈ ಪ್ರಮಾಣ ಹೆಚ್ಚಾಗಿದ್ದು, ಇಲ್ಲಿ ಒಟ್ಟು 1,22,997 ಮಂದಿ ಮತದಾನ ಮಾಡಿದ್ದು, ಇದರಲ್ಲಿ 57,568 ಪುರುಷರು, 65,417 ಮಹಿಳೆಯರಿದ್ದಾರೆ. ಮಲ್ಲೇಶ್ವರದಲ್ಲಿ ಒಟ್ಟು 1,25,278 ಮತದಾನದಲ್ಲಿ 61,948 ಪುರುಷರು, 63,330 ಮಹಿಳೆಯರು; ರಾಜರಾಜೇಶ್ವರಿನಗರದಲ್ಲಿ 2,61,390ರಲ್ಲಿ 1,29,853 ಪುರುಷರು, 1,31,511 ಮಹಿಳೆಯರು; ಮಹಾಲಕ್ಷ್ಮಿ ಲೇಔಟ್‌ನಲ್ಲಿ 1,58,419ರಲ್ಲಿ 78,734 ಪುರುಷರು, 79,673 ಮಹಿಳೆಯರು; ಯಶವಂತಪುರದಲ್ಲಿ 3,56,737ರಲ್ಲಿ 1,78,107 ಪುರುಷರು, 1,78,620 ಮಹಿಳೆಯರು; ಶಾಂತಿನಗರದಲ್ಲಿ 1,19,514ರಲ್ಲಿ 59,397 ಪುರುಷರು, 60,112 ಮಹಿಳೆಯರು ಮತ ಚಲಾಯಿಸಿದ್ದಾರೆ.
ಬಿಬಿಎಂಪಿಯಿಂದ ವಿಧಾನಸಭೆಯತ್ತ ನೋಟ...
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಂಟು ಮಾಜಿ ಸದಸ್ಯರು ವಿಧಾನಸಭೆ ಚುನಾವಣೆಯ ಕಣದಲ್ಲಿದ್ದು, ವಿಧಾನಸೌಧದಲ್ಲಿ ಆಸನ ಅಲಂಕರಿಸುವತ್ತ ನೋಟ ಹರಿಸಿದ್ದಾರೆ.
ಶಾಸಕ ಚುನಾವಣೆಗೆ ಮುನ್ನ ಪಾಲಿಕೆ ಚುನಾವಣೆಗಳು ಮುನ್ನುಡಿಯಾಗಲಿದ್ದು, ಇಲ್ಲಿನ ಜಯ ಹಾಗೂ ಅನುಭವದ ಆಧಾರದ ಮೇಲೆ ವಿಧಾನಸಭೆ ಚುನಾವಣೆ ಕಣಕ್ಕಿಳಿದಿದ್ದಾರೆ.
ಬೆಂಗಳೂರು ನಗರ ಪಾಲಿಕೆಯಾಗಿದ್ದಾಗಿನಿಂದ ಅಂದರೆ 1997ರಿಂದಲೂ ಕಾಚರಕನಹಳ್ಳಿ ವಾರ್ಡ್ ಕಾರ್ಪೊರೇಟರ್ ಆಗಿ, ವಿರೋಧ ಹಾಗೂ ಪ್ರತಿಪಕ್ಷ ನಾಯಕನಾಗಿದ್ದ ಪದ್ಮನಾಭರೆಡ್ಡಿ ಅವರು ಜೆಡಿಎಸ್‌ನಿಂದ ಬಿಜೆಪಿಗೆ ಬಂದವರು. ಅವರು ಎರಡನೇ ಬಾರಿಗೆ ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಎಚ್. ರವೀಂದ್ರ ಕೂಡ ಪಾಲಿಕೆಯ ಹಿರಿಯ ಸದಸ್ಯರಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರು. ವಿಜಯನಗರದಲ್ಲಿ ಕಾರ್ಪೊರೇಟರ್ ಆಗಿದ್ದ ಅವರು ಆಡಳಿತ ಪಕ್ಷ, ವಿರೋಧ ಪಕ್ಷದ ನಾಯಕರಾಗಿದ್ದರು. ಇದೀಗ ಮೂರನೇ ಬಾರಿ ವಿಧಾನಸಭೆ ಕಣದಲ್ಲಿ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ವಿಜಯನಗರ, ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಬಾರಿ ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಪದ್ಮನಾಭರೆಡ್ಡಿ ಹಾಗೂ ರವೀಂದ್ರ ಅವರಿಬ್ಬರೂ ಈ ಹಿಂದೆ ಮೇಯರ್ ಆಗಲು ಸಾಕಷ್ಟು ಪ್ರಯತ್ನಪಟ್ಟಿದ್ದರು.
ಇನ್ನು, ಸಿ.ಕೆ. ರಾಮಮೂರ್ತಿ ಅವರು ಪಟ್ಟಾಭಿರಾಮನಗರ ವಾರ್ಡ್ ಕಾರ್ಪೊರೇಟರ್ ಆಗಿದ್ದವರು. ಶಾಸಕರಾಗಿದ್ದ ವಿಜಯಕುಮಾರ್ ಅವರಿಗೆ ಚುನಾವಣೆ ನಡೆಸಿರುವ ಅನುಭವ ವಿರುವ ರಾಮಮೂರ್ತಿ ಇದೀಗ ಅದೇ ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಗೋವಿಂದರಾಜನಗರ ವಾರ್ಡ್ ಕಾರ್ಪೊರೇಟರ್ ಆಗಿದ್ದ ಉಮೇಶ್ ಶೆಟ್ಟಿ ಅವರು ವಿಜಯನಗರ ವಿಧಾನಸಭೆ ಕ್ಷೇತ್ರದ ಆಕಾಂಕ್ಷಿಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದ ವಿ. ಸೋಮಣ್ಣ ಅವರ ಬದಲು ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ನ ಕೇಶವಮೂರ್ತಿ ಅವರು ಕಾರ್ಪೊರೇಟರ್ ಆಗಿ ಹಲವು ಹುದ್ದೆಗಳಲ್ಲಿದ್ದರು. ರಾಜಾಜಿನಗರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಬಯಸಿದ್ದ ಅವರಿಗೆ ಕಾಂಗ್ರೆಸ್ ಪಕ್ಷ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಕಾರ್ಪೊರೇಟರ್‌ಗಳಾಗಿದ್ದ ಕಾಂಗ್ರೆಸ್‌ನ ಆನಂದಕುಮಾರ್ ಹಾಗೂ ಬಿಜೆಪಿಯ ಶಿವಕುಮಾರ್ ಅವರದ್ದೇ ವಾರ್ಡ್‌ಗಳ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಕಾರ್ಪೊರೇಟ್ ಆಗಿದ್ದ ಎನ್. ಚಂದ್ರ ಅವರು ಬಿಜೆಪಿಯಿಂದ ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಮಹಿಳೆಯರಲ್ಲಿ ನಾಮಪತ್ರ ಸಲ್ಲಿಸಿದ್ದ ಮಾಜಿ ಮೇಯರ್ ಗಂಗಾಂಬಿಕೆ ಕಣದಿಂದ ಹಿಂದೆ ಸರಿದರು.
ರಾಮಲಿಂಗಾರೆಡ್ಡಿ, ಸುರೇಶ್ ಕುಮಾರ್, ಕೆ. ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜು ಅವರು ಕೂಡ ಪಾಲಿಕೆ ಸದಸ್ಯರಾಗಿದ್ದರು. ನಂತರದ ದಿನಗಳಲ್ಲಿ ಇವರೆಲ್ಲ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಶಾಸಕರಾಗಿ ಸಚಿವರೂ ಆಗಿದ್ದರು ಎಂಬುದು ಗಮನಾರ್ಹ. ಎಸ್. ರಘು ನಾಲ್ಕು ಬಾರಿ ಶಾಸಕರಾಗಿದ್ದಾರೆ.
ಕಣದಲ್ಲಿರುವ ಕಾರ್ಪೊರೇಟರ್‌ಗಳು
ಪದ್ಮನಾಭರೆಡ್ಡಿ (ಸರ್ವಜ್ಞನಗರ), ಎಚ್. ರವೀಂದ್ರ (ವಿಜಯನಗರ), ಸಿ.ಕೆ. ರಾಮಮೂರ್ತಿ (ಜಯನಗರ), ಕೇಶವಮೂರ್ತಿ (ಮಹಾಲಕ್ಷ್ಮಿ ಲೇಔಟ್), ಎನ್.ಚಂದ್ರ (ಶಿವಾಜಿನಗರ), ಶಿವಕುಮಾರ್ (ಶಾಂತಿನಗರ), ಆನಂದಕುಮಾರ್ (ಸಿ.ವಿ. ರಾಮನ್‌ನಗರ), ಉಮೇಶ್ ಶೆಟ್ಟಿ (ಗೋವಿಂದರಾಜನಗರ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.