ಬೆಂಗಳೂರು: ಸರ್ವಶಕ್ತ ಎಂದು ಕರೆಸಿಕೊಳ್ಳುವ ಪ್ರಧಾನಿಯವರೇ, ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಲು ಭಯವೇಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಸರ್ವಶಕ್ತ ಪ್ರಧಾನ ಮಂತ್ರಿ ಎಂದು ಬೆಂಬಲಿಗರಿಂದ ಬೊಪರಾಕ್ ಹಾಕಿಸಿಕೊಳ್ಳುತ್ತಿರುವ ಸನ್ಮಾನ್ಯ ನರೇಂದ್ರ ಮೋದಿಯವರೇ, ಗೌತಮ್ ಅದಾನಿ ಎಂಬ ಉದ್ಯಮಿ ಬಗ್ಗೆ ಮಾತನಾಡಲು ನಿಮಗೆ ಮುಜುಗರ ಯಾಕೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರಿಸಲು ಭಯ ಯಾಕೆ?‘ ಎಂದು ಪ್ರಶ್ನೆ ಮಾಡಿದ್ದಾರೆ.
‘2014ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅವರು 2022ರಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು ಹೇಗೆ? 2014ರಲ್ಲಿ 8 ಬಿಲಿಯನ್ ಡಾಲರ್ ಸಂಪತ್ತಿನ ಗೌತಮ್ ಅದಾನಿ ಅವರು 2022ರಲ್ಲಿ 140 ಬಿಲಿಯನ್ ಡಾಲರ್ ನ ಧನಿಕ ಹೇಗಾದರು?‘ ಎಂದಿದ್ದಾರೆ.
‘ನಿಮ್ಮ ಭರವಸೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕೊಟ್ಟಿದ್ದು ಶೇ.10.79ರ ಪ್ರಮಾಣದ ನಿರುದ್ಯೋಗದ ದಾಖಲೆ. ವಿದ್ಯಾವಂತ ಯುವಕರನ್ನು ಪಕೋಡಾ ಮಾರಲು ಹೇಳುವ ನೀವು, ಯುವಜನರಿಗೆ ದುಡ್ಡು ಮಾಡುವ ಈ ಕಲೆಯನ್ನು ಅದಾನಿಯವರಿಂದ ಯಾಕೆ ಪಾಠ ಮಾಡಿಸಬಾರದು?‘ ಎಂದು ಹೇಳಿದ್ದಾರೆ.
‘ನಿಮ್ಮ ವಿದೇಶ ಪ್ರವಾಸದಲ್ಲಿ ಎಷ್ಟು ಬಾರಿ ಗೌತಮ್ ಅದಾನಿ ನಿಮ್ಮ ಜೊತೆಗಿದ್ದರು? ಎಷ್ಟು ಬಾರಿ ವಿದೇಶದಲ್ಲಿ ನಿಮಗೆ ಜೊತೆಯಾದರು? ಅವರು ಯಾವ ಉದ್ಯಮಿಗಳ ನಿಯೋಗದಲ್ಲಿದ್ದರು? ಈ ಪ್ರವಾಸದ ಸಮಯದಲ್ಲಿ ನಿಮ್ಮ ಜೊತೆ ಇತರ ಉದ್ಯಮಿಗಳು ಯಾರು?‘ ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
‘ನೀವು ಭೇಟಿ ನೀಡಿದ ದೇಶಗಳಲ್ಲಿ ಅದಾನಿಯವರು ಯಾವ ಉದ್ಯಮಗಳನ್ನು ಸ್ಥಾಪಿಸಿದರು? ಯಾವ ಗುತ್ತಿಗೆ ಪಡೆದರು? ಶ್ರೀಲಂಕಾ, ಇಸ್ರೇಲ್ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಗೌತಮ್ ಅದಾನಿಯವರ ಉದ್ಯಮ ಸ್ಥಾಪನೆಗೂ ಆ ದೇಶಗಳಿಗೆ ನಿಮ್ಮ ಭೇಟಿಗೂ ಏನಾದರೂ ಸಂಬಂಧ ಇದೆಯೇ? ಎಲ್ಐಸಿ ಮತ್ತಿತರ ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳು ಗೌತಮ್ ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದೆಷ್ಟು? ಯಾರ ಸಲಹೆ ಮತ್ತು ಭರವಸೆಯಿಂದ ಜನರ ದುಡ್ಡನ್ನು ಈ ಸಂಸ್ಥೆಗಳು ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದವು?‘ ಎಂದು ಪ್ರಶ್ನೆ ಮಾಡಿದ್ದಾರೆ.
‘ಇಲ್ಲಿಯ ವರೆಗೆ ಗೌತಮ್ ಅದಾನಿಯವರು ಖರೀದಿಸಿರುವ ಬಿಜೆಪಿಯ ಚುನಾವಣಾ ಬಾಂಡ್ ಗಳ ಒಟ್ಟು ಮೌಲ್ಯ ಎಷ್ಟು? ಇದನ್ನು ಹೊರತುಪಡಿಸಿ ಪಕ್ಷಕ್ಕೆ ಅವರು ಅಧಿಕೃತವಾಗಿ ಕೊಟ್ಟಿರುವ ದೇಣಿಗೆ ಎಷ್ಟು? ದೇಶದ ಆರು ವಿಮಾನ ನಿಲ್ದಾಣಗಳನ್ನು ಗೌತಮ್ ಅದಾನಿ ಸಂಸ್ಥೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿಯಮಾವಳಿಗಳಲ್ಲಿ ಮಾಡಿರುವ ಬದಲಾವಣೆ ಕಾರಣವೇ? ಕೆಲವು ವಿಮಾನ ನಿಲ್ದಾಣಗಳ ಮಾಲೀಕರು ತನಿಖಾ ಸಂಸ್ಥೆಗಳಿಗೆ ಹೆದರಿ ಷೇರು ವಿಕ್ರಯ ಮಾಡಿರುವುದು ನಿಜವೇ?‘ ಎಂದು ಸವಾಲು ಎಸೆದಿದ್ದಾರೆ.
‘ಗೌತಮ್ ಅದಾನಿ ಶೆಲ್ ಕಂಪೆನಿಗಳಲ್ಲಿ ಹೂಡಿಕೆ ಮಾಡಲಾಗಿರುವ ಅಂದಾಜು 20000 ಕೋಟಿ ರೂಪಾಯಿ ಯಾರದ್ದು? ಈ ಬಗ್ಗೆ ಇಡಿಗೆ ಏನಾದರೂ ಮಾಹಿತಿ ಇದೆಯೇ? ಈ ಶೆಲ್ ಕಂಪೆನಿಗಳಿಗೂ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿಯವರಿಗೂ ಏನು ಸಂಬಂಧ? ಭಾರತದ ಬ್ಯಾಂಕುಗಳಿಗೆ 13,500 ಕೋಟಿ ರೂಪಾಯಿ ವಂಚಿಸಿದ್ದ ಮೆಹೋಲ್ ಚೋಕ್ಸಿ ಮೇಲೆ ಇಂಟರ್ ಪೋಲ್ ಹೊರಡಿಸಿದ್ದ ಲುಕ್ ಔಟ್ ನೋಟಿಸನ್ನು ವಾಪಸು ಪಡೆದಿದ್ದು ಯಾಕೆ?‘ ಎಂದು ಸರಣಿ ಟ್ವೀಟ್‌ಗಳ ಮೂಲಕ ಪ್ರಶ್ನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.