ADVERTISEMENT

ಪ್ರಲ್ಹಾದ ಜೋಶಿಯನ್ನು ಕರ್ನಾಟಕದ ಸಿಎಂ ಮಾಡಲು ಆರ್‌ಎಸ್‌ಎಸ್‌ ಹುನ್ನಾರ: ಎಚ್‌ಡಿಕೆ

ಶೃಂಗೇರಿ ಮಠ ಒಡೆದ, ಗಾಂಧಿ ಕೊಂದ ವಂಶದವರು: ಪ್ರಲ್ಹಾದ ವಿರುದ್ಧ ಎಚ್‌ಡಿಕೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 2:55 IST
Last Updated 6 ಫೆಬ್ರುವರಿ 2023, 2:55 IST
ಚಿತ್ರ ಕೃಪೆ: Twitter/@hd_kumaraswamy
ಚಿತ್ರ ಕೃಪೆ: Twitter/@hd_kumaraswamy   

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಳೆ ಕರ್ನಾಟಕ ಭಾಗದ ಬ್ರಾಹ್ಮಣರಂತೆ ಒಳ್ಳೆಯ ಸಂಸ್ಕೃತಿಯವರಲ್ಲ. ಶೃಂಗೇರಿ ಮಠವನ್ನು ಧ್ವಂಸ ಮಾಡಿದ, ಮಹಾತ್ಮ ಗಾಂಧಿಯನ್ನು ಕೊಂದ ವಂಶಕ್ಕೆ ಸೇರಿದ ಬ್ರಾಹ್ಮಣರು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಜೆಡಿಎಸ್‌ನ ಪಂಚರತ್ನ ಯಾತ್ರೆ ಕುರಿತು ಪ್ರಲ್ಹಾದ ಜೋಶಿ ಮಾಡಿದ್ದ ಟೀಕೆಗೆ ಭಾನುವಾರ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಪಂಚರತ್ನ ಯಾತ್ರೆಯ ಮಧ್ಯದಲ್ಲೇ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಲಭಿಸಿರುವ ಮಾಹಿತಿ ಪ್ರಕಾರ, ಮುಂದಿನ ಚುನಾವಣೆ ಬಳಿಕ ಪ್ರಲ್ಹಾದ ಜೋಶಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡುವ ಹುನ್ನಾರ ಆರ್‌ಎಸ್‌ಎಸ್‌ನಲ್ಲಿ ನಡೆದಿದೆ. ಅದೇ ಕಾರಣಕ್ಕಾಗಿ ಅವರು ನಮ್ಮ ಕುಟುಂಬದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ ಎಂದರು.

ಜೋಶಿಯವರು ದಕ್ಷಿಣ ಕರ್ನಾಟಕದ ಬ್ರಾಹ್ಮಣರ ಸಂಸ್ಕೃತಿಯವರಲ್ಲ. ಬ್ರಾಹ್ಮಣ ವೃತ್ತಿ ಮತ್ತು ಸಂಸ್ಕಾರದಲ್ಲಿ ಎರಡು, ಮೂರು ವಿಧಗಳಿವೆ. ಶೃಂಗೇರಿ ಮಠವನ್ನು, ಅಲ್ಲಿಯ ದೇವರ ವಿಗ್ರಹಗಳನ್ನು ಒಡೆದುಹಾಕಿದ ಪೇಶ್ವೆ ವಂಶಕ್ಕೆ ಸೇರಿದವರು. ಮಹಾತ್ಮ ಗಾಂಧಿಯವರನ್ನು ಕೊಂದ ಗುಂಪಿಗೆ ಸೇರಿದವರು. ಶೃಂಗೇರಿ ಮಠವನ್ನು ಧ್ವಂಸಮಾಡಿದ ದೇಶಸ್ಥ ಬ್ರಾಹ್ಮಣ ವಂಶದವರು ಇವರು ಎಂದು ಹೇಳಿದರು.

ಹಳೆ ಕರ್ನಾಟಕ ಭಾಗದ ನಮ್ಮ ಬ್ರಾಹ್ಮಣ ಸಮಾಜದವರು ಸರ್ವೇ ಜನಾ ಸುಖಿನೋ ಭವಂತು ಎನ್ನುತ್ತಾರೆ. ಪೇಶ್ವೆ ವಂಶಕ್ಕೆ ಸೇರಿದ ಇವರಿಗೆ ಸಂಸ್ಕೃತಿ ಬೇಕಿಲ್ಲ. ದೇಶ ಒಡೆಯುವುದು, ಕುತಂತ್ರದ ರಾಜಕಾರಣ ಮಾಡುವುದು. ದೇಶಕ್ಕೆ ಕೊಡುಗೆ ನೀಡಿದವರನ್ನು ದೇಶಭಕ್ತಿಯ ಹೆಸರಿನಲ್ಲಿ ಮಾರಣಹೋಮ ಮಾಡುವ ಪ್ರವೃತ್ತಿಯವರು ಇವರು ಎಂದು ಟೀಕಿಸಿದರು.

ವೀರಶೈವ ಸಮಾಜ, ಒಕ್ಕಲಿಗರು, ದಲಿತರು, ಹಿಂದುಳಿದವರು ಎಲ್ಲರಿಗೂ ಹೇಳುತ್ತಿದ್ದೇನೆ. ಬಿಜೆಪಿಯ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ, ಆರ್‌ಎಸ್‌ಎಸ್‌ನ ಕುತಂತ್ರಕ್ಕೆ ಮರುಳಾಗಬೇಡಿ. ಇಂತಹ ವ್ಯಕ್ತಿಗಳನ್ನು ಮಾಡಿ ರಾಜ್ಯ ಒಡೆಯುತ್ತಾರೆ. ಎಚ್ಚರದಿಂದ ಇರಿ. ಇಂತಹ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ರಾಜ್ಯವನ್ನು ಕುಲಗೆಡಿಸುವ ಪ್ರಯತ್ನದ ವಿರುದ್ಧವೇ ನನ್ನ ಹೋರಾಟ ಎಂದರು.

ಎಲ್ಲ ಮಾಹಿತಿ ಇದೆ: ಪ್ರಲ್ಹಾದ ಜೋಶಿಯವರನ್ನು ಮುಖ್ಯಮಂತ್ರಿ ಮಾಡಿ, ಎಂಟು ಜನರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡುವ ಕುರಿತು ದೆಹಲಿಯಲ್ಲಿ ಸಭೆ ನಡೆದಿದೆ. ಆ ಎಲ್ಲ ವಿವರ ನನಗೆ ಗೊತ್ತಿದೆ. ಉಪ ಮುಖ್ಯಮಂತ್ರಿ ಹುದ್ದೆಗೆ ಗುರುತಿಸಿರುವ ಎಂಟು ಮಂದಿಯ ಪಟ್ಟಿಯೂ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.