ADVERTISEMENT

ಮತದಾರರ ದತ್ತಾಂಶ ₹25 ಸಾವಿರಕ್ಕೆ ಮಾರಾಟ

ಕೋರಮಂಗಲದ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 2:46 IST
Last Updated 27 ಏಪ್ರಿಲ್ 2023, 2:46 IST
   

ಬೆಂಗಳೂರು: ಆರೂವರೆ ಲಕ್ಷಕ್ಕೂ ಹೆಚ್ಚು ಮತದಾರರ ದತ್ತಾಂಶವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೋರಮಂಗಲದ ಖಾಸಗಿ ಕಂಪನಿಯೊಂದರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಆರಂಭಿಸಲಾಗಿದೆ.

ಆಗ್ನೇಯ ವಿಭಾಗದ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಸ್ಥೆಯ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಹಣದ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿದ್ದಾರೆಂದು ಚುನಾವಣೆ ಅಧಿಕಾರಿಗಳು ದೂರು ನೀಡಿದ್ದು ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ. ತನಿಖಾ ಹಂತದಲ್ಲಿರುವ ಕಾರಣ ಸಂಸ್ಥೆಯ ಹೆಸರು ಬಹಿರಂಗ ಪಡಿಸುವುದಿಲ್ಲ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಳೆದ ನವೆಂಬರ್‌ನಲ್ಲಿ ‘ಚಿಲುಮೆ ಸಂಸ್ಥೆ’ಯೂ ಮತದಾರರ ದತ್ತಾಂಶ ಮಾರಾಟ ಮಾಡಿತ್ತು. ಅದೇ ಮಾದರಿಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಕೋರಮಂಗಲದ ಸಂಸ್ಥೆಯೂ ಸಮೀಕ್ಷೆ ನಡೆಸಿದೆ ಎನ್ನಲಾಗಿದೆ.

‘ಮತದಾರರ ಸಂಪೂರ್ಣ ವಿವರವನ್ನು ಸಂಸ್ಥೆ ಸಂಗ್ರಹಿಸಿತ್ತು. ಪ್ರತ್ಯೇಕ ಆ್ಯಪ್‌ ಸಹ ಬಳಸಿತ್ತು. ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಿದ್ದರು? ಈ ಬಾರಿಯ ಯಾವ ಪಕ್ಷ ಬೆಂಬಲಿಸಲಿದ್ದಾರೆ? ಎನ್ನುವ ಮಾಹಿತಿ ಸಂಗ್ರಹಿಸಿತ್ತು’ ಎಂದು ಮೂಲಗಳು ತಿಳಿಸಿವೆ.

‘ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಮತದಾರರ ಮೊಬೈಲ್‌ ಸಂಖ್ಯೆ ಹಾಕಿತ್ತು. ₹ 25 ಸಾವಿರ ನೀಡಿದರೆ ಲಾಗ್‌ಇನ್‌ ಐಡಿ ನೀಡುತ್ತಿತ್ತು’ ಎಂದು ಹೇಳಿವೆ.

‘ಸುಮಾರು 6 ಲಕ್ಷದಷ್ಟು ಮತದಾರರ ಮಾಹಿತಿ ಈ ಸಂಸ್ಥೆಯ ಬಳಿ ಇತ್ತು. ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಅಥವಾ ಅಲ್ಲವೇ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ತಿಳಿಸಿವೆ.

‘ಅಭ್ಯರ್ಥಿಗಳಿಗೆ ಆಮಿಷ’: ಈ ವೆಬ್‌ಸೈಟ್‌ ತೆರೆದ ತಕ್ಷಣವೇ ಸ್ವಾಗತ ಎಂಬ ಸಂದೇಶ ಬರುತ್ತಿದೆ. ಜತೆಗೆ, ₹ 25 ಸಾವಿರದ ಜತೆಗೆ ₹ 500 ಸೇವಾ ಶುಲ್ಕ ನೀಡಿದರೆ ನಿಮ್ಮ ಕ್ಷೇತ್ರದ ಮತದಾರರ ವಿವರ ಪಡೆದು ಈ ಚುನಾವಣೆಯಲ್ಲಿ ಜಯಿಸಿ’ ಎಂಬ ಆಮಿಷದ ಜಾಹೀರಾತು ಬರುತ್ತಿದೆ. ಮೊಬೈಲ್‌ ಸಂಖ್ಯೆಗೆ ಪ್ರಣಾಳಿಕೆ, ಧ್ವನಿ ಮುದ್ರಿಕೆ ಹಾಗೂ ಸಂದೇಶ ಕಳುಹಿಸಬಹುದು. ಹಣವು ಜಮೆ ರೂಪದಲ್ಲಿ ಇರಲಿದೆ. ಒಂದು ವೇಳೆ ಸೋತರೆ ಹಣ ವಾಪಸ್ ಪಡೆಯಬಹುದು’ ಎಂದು ಸಂಸ್ಥೆ ಹೇಳಿಕೊಂಡಿದೆ.

ಪಕ್ಷೇತರ ಅಭ್ಯರ್ಥಿಯೊಬ್ಬರು ನೀಡಿದ್ದ ಸುಳಿವು ಆಧರಿಸಿ ‘ದಿ ನ್ಯೂಸ್‌ ಮಿನಿಟ್‌’ ವೆಬ್‌ಸೈಟ್‌ ತನಿಖಾ ವರದಿ ಪ್ರಕಟಿಸಿತ್ತು. ಬಳಿಕ ಚುನಾವಣಾಧಿಕಾರಿಯು ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.