ಯಾದಗಿರಿ: ವಿವಿಧ ನಿಗಮ ಮಂಡಳಿ ಖಾಲಿ ಇರುವ ಹುದ್ದೆಗಳಿಗೆ ಈಚೆಗೆ ನಡೆದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆಗೆ ಸಂಬಂಧಿಸಿದಂತೆ ಸಿಐಡಿ ತಂಡದಿಂದ ಯಾದಗಿರಿಯಲ್ಲಿ ಗುರುವಾರದಿಂದ ತನಿಖೆ ಆರಂಭವಾಗಿದೆ.
ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ನಗರದ ಹಳೆ ಪ್ರವಾಸಿ ಮಂದಿರಕ್ಕೆ ಬಂದು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು.
ಸಿಐಡಿಯ ಸಿಪಿಐಗಳಾದ ಹರಿವರ್ಧನ್ ಹಾಗೂ ಸಂಗನಾಥ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ಆರಂಭ ಮಾಡಲಾಗಿದೆ.
ಇದುವರೆಗೂ ತನಿಖೆ ನಡೆಸಿದ್ದ ತನಿಖಾಧಿಕಾರಿಗಳಿಂದ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಮಾಹಿತಿ ಪಡೆದರು. ಶುಕ್ರವಾರ ಬಂಧಿತ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿದ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದ್ದು, ಎಲ್ಲಾ ಕೇಸ್ ಫೈಲ್, ಸಾಕ್ಷಿಗಳನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.
ಅಕ್ಟೋಬರ್ 28 ಮತ್ತು 29ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಿಂದ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಸಂಬಂಧಿಸಿದಂತೆ ನಗರದ ಐದು ಪರೀಕ್ಷಾ ಕೇಂದ್ರದಿಂದ 16 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.
ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣ ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.