ಬೆಂಗಳೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಪರೀಕ್ಷೆಯ ಕೀ ಉತ್ತರಗಳಲ್ಲಿತಪ್ಪುಗಳು ಉಳಿದಿರುವ ಬಗ್ಗೆ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರೇ ಆಕ್ಷೇಪ ಎತ್ತಿರುವ ಕಾರಣ ನಿವೃತ್ತ ಐಎಎಸ್ ಅಧಿಕಾರಿ ಬಿ.ಎ.ಹರೀಶ್ ಗೌಡ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ.
‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ಈ ವಿವಾದ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಸಾಹಿತಿ ದೇವನೂರ ಮಹಾದೇವ ಅವರು ಸಹ ತಮ್ಮ ಕಾದಂಬರಿ ಆಧರಿಸಿ ನೀಡಲಾದ ಪ್ರಶ್ನೆಗೆ ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ಹೇಳಿ,ನೇಮಕಾತಿ ಪ್ರಕ್ರಿಯೆ ಕುರಿತಂತೆ ಅಪಸ್ವರ ಎತ್ತಿದ್ದರು.
‘ಕೀ ಉತ್ತರದಲ್ಲಿ ಉಳಿದಿರುವ ತಪ್ಪುಗಳ ಕುರಿತಂತೆ ಸಮಗ್ರವಾಗಿ ಪರಿಶೀಲಿಸಿ ಅಕ್ಟೋಬರ್ 5ರೊಳಗೆ ವರದಿ ಸಲ್ಲಿಸಲು ಸಿಇಟಿ ಸೆಲ್‌ನ ಮುಖ್ಯಸ್ಥರಾಗಿದ್ದ ಬಿ.ಎ.ಹರೀಶ್ ಗೌಡ ಅವರನ್ನು ಕೋರಲಾಗಿದೆ. ಅವರು ವರದಿ ಸಲ್ಲಿಸುವವರೆಗೆ ಅಂತಿಮ ನೇಮಕಾತಿ ಪಟ್ಟಿಯ ಪ್ರಕಟಣೆಯನ್ನು ತಡೆಹಿಡಿಯಲು ಕೆಇಎಗೆ ಸೂಚನೆ ನೀಡಲಾಗಿದೆ’ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ತನಿಖೆಗೆ ಅಗತ್ಯವಾದ ದಾಖಲೆಗಳನ್ನು ಒದಗಿಸುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.