ADVERTISEMENT

ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನ. 16ರಂದು ‘ಪುನೀತ ನಮನ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 12:51 IST
Last Updated 12 ನವೆಂಬರ್ 2021, 12:51 IST
ಪುನೀತ್‌ ರಾಜ್‌ಕುಮಾರ್‌
ಪುನೀತ್‌ ರಾಜ್‌ಕುಮಾರ್‌   

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನ. 16ರಂದು ನಗರದ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಹಾಗೂ ನಿರ್ಮಾಪಕ ಸಾ.ರಾ ಗೋವಿಂದು, ‘ಪುನೀತ್‌ ನಿಧನರಾದ ಮರುದಿನವೇ ಸಿನಿಮಾ ಕ್ಷೇತ್ರದ ಎಲ್ಲರ ಒಕ್ಕೊರಲ ಅಭಿಪ್ರಾಯದಂತೆ ರೂಪಿಸಲಾದ ಕಾರ್ಯಕ್ರಮವಿದು. ಹಾಗಾಗಿ ಎಲ್ಲರೂ ಭಾಗವಹಿಸಲಿದ್ದಾರೆ. ಆದರೆ, ಸ್ಥಳಾವಕಾಶದ ಇತಿಮಿತಿ ಹಾಗೂ ನಿಯಮಾವಳಿಗಳ ಕಾರಣದಿಂದ ಕಾರ್ಯಕ್ರಮದಲ್ಲಿ ಒಂದೂವರೆ ಸಾವಿರ ಮಂದಿಗಷ್ಟೇ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್‌ ಕುಟುಂಬದ ಸದಸ್ಯರು, ದಕ್ಷಿಣ ಭಾರತದ ಎಲ್ಲ ಸಿನಿ ಪ್ರಮುಖರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಎಲ್ಲ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪಾಸ್‌ ಇದ್ದರಷ್ಟೇ ಪ್ರವೇಶ: ‘ವಾಣಿಜ್ಯ ಮಂಡಳಿಯ ಎಲ್ಲ ಅಂಗ ಸಂಸ್ಥೆಗಳೂ ಸೇರಿ ಎಲ್ಲರಿಗೂ ಸೀಮಿತ ಸಂಖ್ಯೆಯ ಪಾಸ್‌ಗಳನ್ನು ನೀಡಲಾಗಿದೆ. ಕಾರ್ಯಕ್ರಮದ ಪಾಸ್‌ ಹಾಗೂ ಸಂಘಟಕರು ನೀಡಿದ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ. ಕಾರ್ಯಕ್ರಮ ಎಲ್ಲ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ. ಹಾಗಾಗಿ ಅಭಿಮಾನಿಗಳು ತಾವಿರುವಲ್ಲಿಯೇ ನೇರ ಪ್ರಸಾರ ವೀಕ್ಷಿಸಿ ‘ಅಪ್ಪು’ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕು’ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮ ಸ್ವರೂಪ: ‘ವೇದಿಕೆಯಲ್ಲಿ ಪುನೀತ್‌ ಪುತ್ಥಳಿ ಮಾತ್ರ ಇರಲಿದೆ. ಎಲ್ಲ ಗಣ್ಯರೂ ವೇದಿಕೆಯ ಕೆಳಗೆ ಕುಳಿತು ಗೌರವ ಸಲ್ಲಿಸಲಿದ್ದಾರೆ’ ಎಂದು ಕಾರ್ಯಕ್ರಮದ ಆಯೋಜಕ, ನಿರ್ಮಾಪಕ ನವರಸನ್‌ ಮಾಹಿತಿ ನೀಡಿದರು.

‘3.15ಕ್ಕೆ ಮುಖ್ಯ ಕಾರ್ಯಕ್ರಮ ಆರಂಭವಾಗಲಿದೆ. ಮೊದಲು ಸ್ಯಾಕ್ಸೋಫೋನ್‌ ವಾದನ ನಡೆಯಲಿದೆ. ನಂತರ ಪುನೀತ್‌ ಅವರ ಬದುಕಿನ ಕುರಿತು ವಿಡಿಯೋ ಪ್ರದರ್ಶನ ನಂತರ ಗೌರವ ಸಲ್ಲಿಸುವ ವಿಡಿಯೋ ಪ್ರದರ್ಶನ ನಡೆಯಲಿದೆ’ ಎಂದು ನವರಸನ್‌ ಹೇಳಿದರು.

‘ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯದ ಗೀತನಮನ ಸಲ್ಲಿಸಲಾಗುವುದು. ಬಳಿಕ ಮೋಂಬತ್ತಿ ಬೆಳಗಿ ನಮನ ಸಲ್ಲಿಸಲಾಗುವುದು. ಪ್ರೇಕ್ಷಕರು ತಮ್ಮ ಮೊಬೈಲ್‌ ಟಾರ್ಚ್‌ಗಳನ್ನು ಬೆಳಗಿ ಗೌರವ ಸಲ್ಲಿಸಲಿದ್ದಾರೆ. ನಮನದ ಬಳಿಕ ಗುರುಕಿರಣ್‌, ವಿಜಯ್‌ ಪ್ರಕಾಶ್‌ ನೇತೃತ್ವದಲ್ಲಿ ಗೀತ ಗೌರವ ಸಲ್ಲಿಸಲಾಗುವುದು’ ಎಂದು ಅವರು ಹೇಳಿದರು.

ಚಿತ್ರೀಕರಣ ಸ್ಥಗಿತ: ‘ಸಿನಿಕ್ಷೇತ್ರದ ಎಲ್ಲರೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ಅಂದು ಯಾವುದೇ ಸಿನಿಮಾ ಚಿತ್ರೀಕರಣ ಇರುವುದಿಲ್ಲ. ಆದರೆ ಚಿತ್ರ ಪ್ರದರ್ಶನ ಎಂದಿನಂತೆ ಇರಲಿದೆ’ ಎಂದು ಸಾ.ರಾ.ಗೋವಿಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.