ADVERTISEMENT

ಸುಪ್ರೀಂ ಕೋರ್ಟ್‌ ನೆರವಿನ ನಿರೀಕ್ಷೆಯಲ್ಲಿ ‘ದೋಸ್ತಿ’ಗಳು

‘ವಿಶ್ವಾಸ’ ಹೋದ ಮೇಲೆ ನಿರ್ಗಮಿಸುವುದಕ್ಕಿಂತ ರಾಜ್ಯಪಾಲರೇ ವಜಾ ಮಾಡಲಿ ಎಂಬ ಹಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:49 IST
Last Updated 19 ಜುಲೈ 2019, 19:49 IST
   

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ದಾರಿಗಳು ಮೈತ್ರಿಕೂಟಕ್ಕೆ ಬಹುತೇಕ ಮುಚ್ಚಿದಂತಿದ್ದು, ಸುಪ್ರೀಂಕೋರ್ಟ್‌ ತಮ್ಮ ನೆರವಿಗೆ ಬರಲಿದೆ ಎಂಬ ಭರವಸೆ ಜೆಡಿಎಸ್‌–ಕಾಂಗ್ರೆಸ್ ನಾಯಕರಲ್ಲಿ ಇನ್ನೂ ಉಳಿದಿದೆ.

ಒಂದು ವೇಳೆ ಸುಪ್ರೀಂಕೋರ್ಟ್‌ ತಮ್ಮ ಆಸರೆಗೆ ಬರದೇ ಇದ್ದರೆ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡುವವರೆಗೂ ಕಲಾಪವನ್ನು ಮುಂದಕ್ಕೆ ತಳ್ಳುವ ಮತ್ತೊಂದು ಲೆಕ್ಕಾಚಾರವೂ ಇದೆ. ಈ ಕಾರಣಕ್ಕಾಗಿಯೇ ಶುಕ್ರವಾರ ಇಡೀ ದಿನ ಚರ್ಚೆ ನಡೆಸುವ ದಾರಿಯನ್ನು ಮೈತ್ರಿ ಕೂಟದ ನಾಯಕರು ಹಿಡಿದರು ಎಂದು ಹೇಳಲಾಗುತ್ತಿದೆ.

‘ವಿಶ್ವಾಸಮತ ಯಾಚನೆಯ ನಿರ್ಣಯವನ್ನು ಮುಖ್ಯಮಂತ್ರಿಯೇ ಮಂಡಿಸಿ, ಈ ವಿಷಯ ಕುರಿತ ಚರ್ಚೆ ನಡೆಯುತ್ತಿರುವಾಗ ವಿಶ್ವಾಸಮತ ನಿರ್ಣಯ ಪ್ರಕ್ರಿಯೆ ಮಂಡನೆಗೆ ಗಡುವು ವಿಧಿಸಿದ್ದು ಸರಿಯಲ್ಲ. ಈ ಸಂಬಂಧ ರಾಜ್ಯಪಾಲರಿಗೆ ಸೂಕ್ತ ನಿರ್ದೇಶನ ನೀಡಿ’ ಎಂದು ಕೋರಿ ಮುಖ್ಯಮಂತ್ರಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ADVERTISEMENT

‘ಶಾಸಕಾಂಗ ಪಕ್ಷದ ನಾಯಕನಿಗೆ ಇರುವ ಅಧಿಕಾರವನ್ನು ಸುಪ್ರೀಂಕೋರ್ಟ್‌ ಮೊಟಕು ಮಾಡಿದೆ’ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಈ ಕುರಿತು ವಿವರಣೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಎರಡೂ ಅರ್ಜಿಗಳು ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ವಿಶ್ವಾಸಮತಕ್ಕೆ ಗಡುವು ವಿಧಿಸಿದ ರಾಜ್ಯಪಾಲರ ಸೂಚನೆಗೆ ಕೋರ್ಟ್ ತಡೆಹಾಕಿದರೆ, ಅದನ್ನು ಬಳಸಿಕೊಂಡು ಅತೃಪ್ತರು ಅಥವಾ ಬಿಜೆಪಿ ಶಾಸಕರನ್ನು ಸೆಳೆಯುವ ಆಲೋಚನೆ ದೋಸ್ತಿ ನಾಯಕರದ್ದಾಗಿದೆ. ರಾಜೀನಾಮೆ ಕೊಟ್ಟ 15ಕ್ಕೂ ಹೆಚ್ಚು ಶಾಸಕರು ವಾಪಸ್ ಬರುವುದಿಲ್ಲ ಎಂದು ಹೇಳುತ್ತಿದ್ದು, ಈ ಹಂತದಲ್ಲಿ ವಿಶ್ವಾಸ ಮತ ಸಾಬೀತುಪಡಿಸುವುದು ಕಷ್ಟ. ವಿಶ್ವಾಸಮತ ನಿರ್ಣಯ ಮತಕ್ಕೆ ಹಾಕಿದಾಗ ಸೋತು ಸರ್ಕಾರ ಕಳೆದುಕೊಳ್ಳುವುದು ಅಥವಾ ಮತಕ್ಕೆ ಹಾಕದೇ ರಾಜೀನಾಮೆ ಕೊಟ್ಟು ಹೊರನಡೆದಾಗ ಆಗುವ ಅವಮಾನಕ್ಕೆ ಒಳಗಾಗುವ ಬದಲು ರಾಜ್ಯಪಾಲರಿಗೆ ಸಡ್ಡು ಹೊಡೆಯುವ ಬಗ್ಗೆಯೂ ಪಕ್ಷದಲ್ಲಿ ಚರ್ಚೆ ನಡೆದಿದೆ.

ಕಾಂಗ್ರೆಸ್‌ –ಜೆಡಿಎಸ್‌ ಅರ್ಜಿ
ನವದೆಹಲಿ:
‘ರಾಜೀನಾಮೆ ಸಲ್ಲಿಸಿರುವ 15 ಜನ ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ. ಅದು ಅವರ ವಿವೇಚನೆಗೆ ಬಿಟ್ಟದ್ದು’ ಎಂಬ ಜುಲೈ 17ರ ಮಧ್ಯಂತರ ಆದೇಶ ಕುರಿತು ಸ್ಪಷ್ಟನೆ ನೀಡುವಂತೆ ಕೋರಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಮೇಲ್ಮನವಿ ಸಲ್ಲಿಸಿವೆ.

‘ಶಾಸಕರಿಗೆ ವಿಪ್‌ ಜಾರಿ ಮಾಡುವ ನಿಟ್ಟಿನಲ್ಲಿ ಸಂವಿಧಾನದ 10ನೇ ಪರಿಚ್ಛೇದದ ಅಡಿ ಪಕ್ಷಗಳಿಗೆ ಇರುವ ಹಕ್ಕನ್ನು ಈ ಆದೇಶದಿಂದ ಕಸಿದುಕೊಂಡಂತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ವಿಶ್ವಾಸಮತ ಯಾಚನೆ ವೇಳೆ ಆಯಾ ಪಕ್ಷಗಳು ಶಾಸಕರಿಗೆ ವಿಪ್ ಜಾರಿ ಮಾಡುವುದು ಅನಿವಾರ್ಯ. ವಿಪ್ ಉಲ್ಲಂಘಿಸುವ ಶಾಸಕರನ್ನು ಅನರ್ಹಗೊಳಿಸಬಹುದು ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದಾಗಿ, ನಾಗಾಲ್ಯಾಂಡ್‌ನಲ್ಲಿ ಕಿಹೊತೊ ಹೊಲೊಹನ್ ಹಾಗೂ ಝಾಚಿಲ್ಹು ಮತ್ತಿತರರ ಪ್ರಕರಣದ ನಿದರ್ಶನವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.