ADVERTISEMENT

ಯೋಜನಾ ನಿರಾಶ್ರಿತ ಪ್ರಮಾಣ ಪತ್ರ: ಪಿಸಿಸಿಎಫ್‌ ಶಿಫಾರಸು

ಸ್ವ ಇಚ್ಛೆಯಿಂದ ಪುನರ್ವಸತಿಗೊಳ್ಳುವ ಅರಣ್ಯವಾಸಿಗಳಿಗೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 23:30 IST
Last Updated 25 ನವೆಂಬರ್ 2024, 23:30 IST
<div class="paragraphs"><p>ಅರಣ್ಯ ಪ್ರದೇಶ</p></div>

ಅರಣ್ಯ ಪ್ರದೇಶ

   

ಬೆಂಗಳೂರು: ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಮತ್ತು ಅರಣ್ಯ ಪ್ರದೇಶಗಳಿಂದ ಸ್ವಯಂ ಪ್ರೇರಿತರಾಗಿ ಹೊರ ಬಂದು ಪುನರ್ವಸತಿ ಹೊಂದಲು ಬಯಸುವ ಅರಣ್ಯವಾಸಿಗಳಿಗೆ ‘ಯೋಜನಾ ನಿರಾಶ್ರಿತ ಪ್ರಮಾಣ ಪತ್ರ’ ನೀಡುವ ಅಗತ್ಯವಿದೆ ಎಂದು ಪಿಸಿಸಿಎಫ್‌ (ಅರಣ್ಯಪಡೆ ಮುಖ್ಯಸ್ಥರು) ಬ್ರಿಜೇಶ್‌ ಕುಮಾರ್ ದೀಕ್ಷಿತ್‌ ಪ್ರತಿಪಾದಿಸಿದ್ದಾರೆ.

ಈ ಸಂಬಂಧ ಅವರು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ.

ADVERTISEMENT

ಹುಲಿಸಂರಕ್ಷಿತ ಪ್ರದೇಶ, ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಿಂದ ಸ್ವ ಇಚ್ಛೆಯಿಂದ ಪುನರ್ವಸತಿಗೊಳಿಸುವ ಕಾರ್ಯ ಪರಿಣಾಮಕಾರಿಯಾಗಿ ಜಾರಿಯಾದರೆ ಅರಣ್ಯ ಸಂರಕ್ಷಣೆ ಮತ್ತು ಮಾನವ– ವನ್ಯಜೀವಿ ಸಂಘರ್ಷದ ನಿಯಂತ್ರಣವೂ ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದಕ್ಕಾಗಿ, ‘ಕರ್ನಾಟಕ ನಾಗರಿಕ ಸೇವೆಗಳ(ಸಾಮಾನ್ಯ ನೇಮಕಾತಿ)(57 ನೇ ತಿದ್ದುಪಡಿ) ನಿಯಮ,2000’ ಕಾಯ್ದೆಗೆ ತಿದ್ದುಪಡಿ ಮಾಡಿ ‘ಪ್ರಾಜೆಕ್ಟ್’ ವ್ಯಾಖ್ಯಾನದಡಿ,  ‘ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಿಂದ ಸ್ವ ಇಚ್ಛೆಯಿಂದ ಪುನರ್ವಸತಿಗೊಳ್ಳುವ ಕುಟುಂಬ’ ಎಂಬುದನ್ನು ಸೇರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಕ್ತ ಶಿಫಾರಸು ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಚಾರವಾಗಿ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಗಿರಿಧರ ಕುಲಕರ್ಣಿಯವರು ಅರಣ್ಯ ಸಚಿವರಿಗೆ ಮನವಿಯೊಂದನ್ನು ಸಲ್ಲಿಸಿದ್ದು, ಮುಂದಿನ ಕ್ರಮಕ್ಕಾಗಿ ಸಚಿವರ ಕಚೇರಿಯಿಂದ ಟಿಪ್ಪಣಿಯೊಂದನ್ನು ಕಳುಹಿಸಲಾಗಿದೆ ಎಂದು ದೀಕ್ಷಿತ್ ಉಲ್ಲೇಖಿಸಿದ್ದಾರೆ.

ರಾಜ್ಯದ ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅರಣ್ಯ ವಾಸಿಗಳು ಹಾಗೂ ಗಿರಿಜನರು ತಮ್ಮ ಕಲ್ಯಾಣಕ್ಕಾಗಿ ಮತ್ತು ಅಭಿವೃದ್ಧಿಗಾಗಿ ಅರಣ್ಯಗಳಿಂದ ಹೊರ ಬರಲು ಸಿದ್ಧರಿದ್ದಾರೆ. ಇದರಿಂದಾಗಿ ಮಾನವರಿಂದ ಅರಣ್ಯಗಳ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಅರಣ್ಯವಾಸಿಗಳ ಮತ್ತು ಗಿರಿಜನರ ಮುಂದಿನ ಪೀಳಿಗೆಯು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ತಮ್ಮ ಭವಿಷ್ಯ ರೂಪಿಸಲು ಸಹಾಯಕವಾಗುತ್ತದೆ ಎಂದು ಗಿರಿಧರ್‌ ಅರಣ್ಯ ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಈ ರೀತಿ ಪುನರ್ವಸತಿಗೊಳ್ಳುವ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯುವುದಕ್ಕೆ ಅನುಕೂಲವಾಗಲು ಮತ್ತು ಪುನರ್ವಸತಿ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿಸಲು ‘ಯೋಜನಾ ನಿರಾಶ್ರಿತ ಪ್ರಮಾಣ ಪತ್ರ’ ನೀಡಬೇಕು. ಮಹಾರಾಷ್ಟ್ರದಲ್ಲಿ ಈ ರೀತಿಯ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.