ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ (30) ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ.
‘ಯಡಿಯೂರಪ್ಪ ಪುತ್ರಿ ಪದ್ಮಾವತಿಯವರ ಮಗಳು, ವೈದ್ಯೆಯಾಗಿದ್ದ ಸೌಂದರ್ಯ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯ ವೈದ್ಯ ಡಾ.ನೀರಜ್ ಜೊತೆ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 9 ತಿಂಗಳ ಮಗು ಇದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ವಸಂತನಗರದಲ್ಲಿರುವ ಲೆಗೆಸಿ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ದಂಪತಿ ವಾಸವಿದ್ದರು. ಅದೇ ಮನೆಯಲ್ಲೇ ಸೌಂದರ್ಯ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಪತಿ ನೀರಜ್ ಹಾಗೂ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ಅದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿಸಲಾಗಿದೆ’ಎಂದೂ ತಿಳಿಸಿದರು.
ಗುರುವಾರವಷ್ಟೇ ಬಂದಿದ್ದ ಸೌಂದರ್ಯ: ‘ಹೆರಿಗೆಗೆಂದು ಸೌಂದರ್ಯ ತವರು ಮನೆಗೆ ಹೋಗಿದ್ದರು. ಕೆಲದಿನ ಆಸ್ಪತ್ರೆಯಲ್ಲಿ ಇದ್ದರು. ಮಗು ಜನಿಸಿದ ಬಳಿಕ ಯಡಿಯೂರಪ್ಪ ಅವರ ಮನೆಯಲ್ಲಿ ಕೆಲ ತಿಂಗಳು ತಂಗಿದ್ದರು. ಅಲ್ಲಿಂದ, ಮಗು ಸಮೇತ ಗುರುವಾರವಷ್ಟೇ (ಜ.27) ಫ್ಲ್ಯಾಟ್‌ಗೆ ಬಂದಿದ್ದರು’ ಎಂದು ಅಧಿಕಾರಿ ಹೇಳಿದರು.
‘ನೀರಜ್ ಅವರು ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಗೆ ಹೋಗಿದ್ದರು. ಇಬ್ಬರು ಕೆಲಸದವರು ಮಾತ್ರ ಮನೆಯಲ್ಲಿದ್ದರು. ಒಬ್ಬರು, ಮಗುವನ್ನು ಆಡಿಸುತ್ತಿದ್ದರು. ಸೌಂದರ್ಯ ಅವರು ಕೊಠಡಿಯೊಳಗೆ ತೆರಳಿದ್ದರು.’
‘ತಿಂಡಿ ಸಿದ್ಧಪಡಿಸಿದ್ದ ಕೆಲಸದ ಮಹಿಳೆ, ಸೌಂದರ್ಯ ಅವರಿಗೆ ಕೊಡಲು ಹೋಗಿದ್ದರು. ಆದರೆ, ಅವರು ಕೊಠಡಿ ಬಾಗಿಲು ತೆರೆದಿರಲಿಲ್ಲ. ಗಾಬರಿಗೊಂಡ ಮಹಿಳೆ, ನೀರಜ್ ಅವರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದರು. ನಂತರ, ಅಪಾರ್ಟ್‌ಮೆಂಟ್ ಕೆಲಸಗಾರರೊಬ್ಬರು ಬಾಲ್ಕನಿ ಮೂಲಕ ಕೊಠಡಿಯೊಳಗೆ ಹೋಗಿದ್ದರು. ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಸೌಂದರ್ಯ ಇರುವುದು ಕಂಡಿತ್ತು. ಆ ಕೆಲಸಗಾರನೇ, ಕೊಠಡಿ ಬಾಗಿಲು ತೆರೆದಿದ್ದರು. ಪೊಲೀಸ್ ಠಾಣೆಗೂ ವಿಷಯ ತಿಳಿಸಿದ್ದರು’ ಎಂದೂ ಪೊಲೀಸ್ ಅಧಿಕಾರಿ ವಿವರಿಸಿದರು.
‘ಪತಿ ಹಾಗೂ ಇತರರು, ನೇಣಿನಿಂದ ಇಳಿಸಿ ಸೌಂದರ್ಯ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ನಂತರವೇ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು’ ಎಂದೂ ಹೇಳಿದರು. ‘ಸೌಂದರ್ಯ ಅವರದ್ದು ಆತ್ಮಹತ್ಯೆಯೋ ಅಥವಾ ಬೇರೆ ಏನಾದರೂ ಕಾರಣ ಇದೆಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ, ನಿಖರ ಮಾಹಿತಿ ಲಭ್ಯವಾಗಲಿದೆ‘ ಎಂದೂ ತಿಳಿಸಿದರು.
ಅಂತ್ಯಕ್ರಿಯೆ: ಬೆಂಗಳೂರು ಉತ್ತರ ತಾಲ್ಲೂಕಿನ ಅಬ್ಬಿಗೆರೆಯಲ್ಲಿರುವ ಪತಿ ನೀರಜ್ ಮಾಲೀಕತ್ವದ ‘ಕಲ್ಪವೃಕ್ಷ’ ಫಾರ್ಮ್ ಹೌಸ್ ಜಾಗದಲ್ಲಿ ಅಂತ್ಯಕ್ರಿಯೆಯನ್ನು ಶುಕ್ರವಾರ ರಾತ್ರಿಯೇ ಕುಟುಂಬಸ್ಥರು ನೆರವೇರಿಸಿದರು.
‘ತಡವಾಗಿ ಹೋದ ಪೊಲೀಸರು’
‘ಮನೆಯಿಂದ ಮೃತದೇಹ ಸಾಗಿಸಿ ಮೂರು ಗಂಟೆ ಬಳಿಕ ಪೊಲೀಸರು, ಮನೆಗೆ ಬಂದಿದ್ದರು. ಅಷ್ಟರಲ್ಲಿ ಹಲವರು ಮನೆ, ಘಟನೆ ನಡೆದ ಕೊಠಡಿಯಲ್ಲೆಲ್ಲ ಓಡಾಡಿದ್ದರು’ ಎಂದು ಸ್ಥಳೀಯರೊಬ್ಬರು ಹೇಳಿದರು.
‘ವಿಷಯ ತಿಳಿದ ಕೂಡಲೇ ಮನೆ ಪ್ರವೇಶವನ್ನು ನಿರ್ಬಂಧಿಸಬೇಕಿತ್ತು. ಪುರಾವೆಗಳನ್ನು ಸಂರಕ್ಷಿಸಬೇಕಿತ್ತು. ಈ ಕೆಲಸವನ್ನು ಪೊಲೀಸರು ಮಾಡಿಲ್ಲ. ಎಲ್ಲ ಮುಗಿದ ಮೇಲೆ ಬಂದು, ಕೊಠಡಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ’ ಎಂದೂ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ‘ಜೀವ ಇರಬಹುದೆಂದು ತಿಳಿದು ಮನೆಯವರೇ ಸೌಂದರ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ, ತನಿಖಾ ಪ್ರಕ್ರಿಯೆ ನೆರವೇರಿಸಿದ್ದಾರೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.