ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಯಾರೊಬ್ಬರೂ ದೇಶಕ್ಕಾಗಿ ಹೋರಾಟ ಮಾಡಿಲ್ಲ. ಒಬ್ಬರೂ ದೇಶಕ್ಕಾಗಿ ಪ್ರಾಣಕೊಟ್ಟಿಲ್ಲ. ಮನುಷ್ಯರನ್ನು ಜಾತಿ, ಧರ್ಮದ ಹೆಸರಲ್ಲಿ ವಿಂಗಡಿಸಿದ್ದು ದೇವರು ಅಲ್ಲ, ಎಲ್ಲ ಮಾಡಿದ್ದು ಮನುಸ್ಮೃತಿ. ಆರ್‌ಎಸ್‌ಎಸ್‌ನವರು ಮನುಸ್ಮೃತಿ ಪರವಾಗಿರುವುದರಿಂದಲೇ ನಮ್ಮ ಸಂವಿಧಾನ ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಂವಿಧಾನವನ್ನು ಅಂಗೀಕರಿಸಿರುವುದಕ್ಕೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಉದ್ಧೇಶಿಸಿ ಅವರು ಮಾತನಾಡಿದ್ದಾರೆ.
‘ಬಸವಣ್ಣನವರು 850 ವರ್ಷಗಳ ಹಿಂದೆ ಜಾತಿ ವ್ಯವಸ್ಥೆಯನ್ನು, ಜಾತಿ ಅಸಮಾನತೆಯನ್ನು ವಿರೋಧಿಸಿದ್ದರು. ಆದರೆ, ಇವತ್ತಿಗೂ ಜಾತಿ ವ್ಯವಸ್ಥೆ ಹೋಗಿಲ್ಲ. ಬಾಯಲ್ಲಿ ಬಸವಾದಿ ಶರಣರ ವಚನ ಹೇಳೋದು. ಆಮೇಲೆ, ನೀನು ಯಾವ ಜಾತಿ ಅಂತ ಕೇಳ್ತಾರೆ. ಈಗಲೂ ಇವನಾರವ, ಇವನಾರವ ಅಂತಲೇ ಕೇಳುತ್ತಿದ್ದಾರೆ ಹೊರತು, ಇವ ನಮ್ಮವ ಅಂತ ಹೇಳುತ್ತಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಧ್ಯೇಯೋದ್ದೇಶಗಳು ಎಷ್ಟರ ಮಟ್ಟಿಗೆ ಜಾರಿಯಾಗಿವೆ, ಏಕಿನ್ನೂ ಸಮಾನತೆಯ ಸಮಾಜ ನಿರ್ಮಾಣ ಆಗಿಲ್ಲ ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ಸಂವಿಧಾನ ಜಾರಿ ಸಭೆಯಲ್ಲಿ ಅಂಬೇಡ್ಕರ್ ಅವರು ಆಡಿದ ಎಚ್ಚರಿಕೆಯ ಮಾತುಗಳನ್ನು ನಾವು ಮರೆಯಬಾರದು ಎಂದಿದ್ದಾರೆ.
ಪ್ರತಿಯೊಬ್ಬರಿಗೂ ಒಂದು ವೋಟು, ಒಂದು ಮೌಲ್ಯ ಸಿಕ್ಕಿದೆ. ಆದರೆ ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ ಅಸಮಾನತೆ ಹೋಗಲಾಡಿಸದಿದ್ದರೆ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿ ಆಗಲ್ಲ ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ಅವರು ನೀಡಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ದೂರದೃಷ್ಟಿ ಇತ್ತು. ಆದ್ದರಿಂದಲೇ, ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ ಒಳ್ಳೆಯವರ ಕೈಯಲ್ಲಿ ಇರಬೇಕು. ಕೆಟ್ಟವರ ಕೈಗೆ ಹೋದರೆ ಮೌಲ್ಯಗಳು ಸಾಯುತ್ತವೆ ಎಂದು ಎಚ್ಚರಿಸಿದ್ದರು ಎಂದು ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಬಿಜೆಪಿಯ ಮಾತೃಸಂಸ್ಥೆ. ಇದರ ಅಧ್ಯಕ್ಷನಾಗಿದ್ದ ಗೋಳ್ವಾಳ್ಕರ್, ಅಂಬೇಡ್ಕರ್ ಅವರ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು. ಬ್ರಿಟೀಷರ ಅವಧಿಯಲ್ಲೇ ಹುಟ್ಟಿದ ಆರ್‌ಎಸ್‌ಎಸ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಲಿಲ್ಲ. ಈಗ ಆರ್‌ಎಸ್‌ಎಸ್ ದೇಶಭಕ್ತಿಯ ಪಾಠ ಮಾಡುತ್ತಿದೆ. ಆರ್‌ಎಸ್‌ಎಸ್‌ನ ಒಬ್ಬರೂ ದೇಶಕ್ಕಾಗಿ ಹೋರಾಡಿಲ್ಲ, ಒಬ್ಬನೂ ದೇಶಕ್ಕಾಗಿ ಪ್ರಾಣಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿದೆ. ಕಾಂಗ್ರೆಸ್ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಇದೇ ಎರಡೂ ಪಕ್ಷಗಳಿಗೂ ಇರುವ ವ್ಯತ್ಯಾಸ ಎಂದಿದ್ದಾರೆ.
ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಬಗ್ಗೆ ನಮಗೆ ಎಚ್ಚರಿಕೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ ಆರ್‌ಎಸ್‌ಎಸ್‌ನವರು ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು ಎಂದು ಕಿಡಿಕಾರಿದ್ದಾರೆ.
ಬಾಬಾ ಸಾಹೇಬರ ಸಂವಿಧಾನ ಜಾರಿಗೂ ಮೊದಲು ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆಯನ್ನು ಆಚರಿಸುವ ಅನಾಗರಿಕ ವ್ಯವಸ್ಥೆ ಇತ್ತು. ಶೂದ್ರರು, ದಲಿತರು, ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸುವ ಅಲಿಖಿತವಾದ ಮನುಸ್ಮೃತಿಯ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಈಗಲೂ ಹುನ್ನಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಚರಿತ್ರೆ ಹಾಗೂ ಇತಿಹಾಸವನ್ನು ನಾವು ಮರೆಯಬಾರದು. ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಮಗೆ ದೊರೆತಿರುವ ಸ್ವಾತಂತ್ರ್ಯ ಸಫಲತೆ ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದರು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.