ADVERTISEMENT

ಬಿಜೆಪಿ ಅವಧಿಯಲ್ಲಿ ಹಗರಣಗಳ ಸರಮಾಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 17:07 IST
Last Updated 19 ಜುಲೈ 2024, 17:07 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸಿದ ಅವಧಿಯಲ್ಲಿ ಸಾವಿರಾರು ಕೋಟಿ ಮೊತ್ತದ ಹಗರಣಗಳ ಸರಮಾಲೆಯೇ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ವಿಧಾನಸಭೆಯಲ್ಲಿ ಈ ಕುರಿತು ದಾಖಲೆಗಳನ್ನು ಮಂಡನೆ ಮಾಡಿದ ಅವರು,  2008-2013 ಹಾಗೂ 2019–2023ರ ಅವಧಿಯ ಬಿಜೆಪಿ ಆಡಳಿತದ ಹಲವು ಹಗರಣಗಳು ಬಯಲಾಗುತ್ತಲೇ ಇವೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ಮೊತ್ತದ ಅಕ್ರಮವೇ ನಡೆದಿತ್ತು ಎಂದು ವಿವರ ನೀಡುವ ಮಾಹಿತಿಯನ್ನು ಪ್ರದರ್ಶಿಸಿದರು.

ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್‌ ಹಗರಣದಲ್ಲಿ ಬಡ ಜನರ ಸಾವಿರಾರು ಕೋಟಿ ಹಣವನ್ನು ದೋಚಿದವರನ್ನು ಇ.ಡಿ, ಐಟಿ ಹಾಗೂ ಸಿಬಿಐ ಬಂಧಿಸುವ ಕೆಲಸ ಮಾಡಿಲ್ಲ. ಜಯನಗರ, ಬಸವನಗುಡಿಯ ಬೀದಿ ಬದಿಯ ಕೆಲ ಕಳ್ಳರು ವಿಧಾನಸೌಧ, ಸಂಸತ್‌ಗೂ ಆಯ್ಕೆಯಾಗಿ ಹೋಗಿದ್ದಾರೆ ಎಂದೂ ಅವರು ಮಂಡನೆ ಮಾಡಿದ ದಾಖಲೆಯಲ್ಲಿ ವಿವರಿಸಿದ್ದಾರೆ. 

ADVERTISEMENT

ಆರ್.ಅಶೋಕ ಅವರು ಕಂದಾಯ ಸಚಿವರಾಗಿದ್ದಾಗ ಅವರ ಆಪ್ತ ಸಹಾಯಕರಾಗಿದ್ದ ಶೃಂಗೇರಿಯ ಸಬ್‌ ರಿಜಿಸ್ಟ್ರಾರ್ ಎಚ್‌.ಎಸ್‌. ಚಲುವರಾಜ್ ಲಂಚ ಕೇಳಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅಶೋಕ್‌ ಮೇಲಿನ ಭೂ ಹಗರಣ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಕೃಷಿ ಸಚಿವರಾಗಿದ್ದ ಬಿ.ಸಿ. ಪಾಟೀಲ್ ಕೃಷಿ ಇಲಾಖೆಯ ನೌಕರರೇ ಲಂಚ ಕೇಳುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದರು ಎಂದೂ ಹೇಳಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ಅವಧಿಯಲ್ಲಿ ₹40 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ₹2 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿಯ ಎಚ್‌. ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಹೇಳಿದ್ದರು. ಗುತ್ತಿಗೆದಾರರ ಸಂಘ ಶೇ 40 ಕಮಿಷನ್‌ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಟೀಲ ಆತ್ಮಹತ್ಯೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್‌. ಈಶ್ವ‍ರಪ್ಪ ರಾಜೀನಾಮೆ ನೀಡಿದ್ದರು ಎಂದು ವಿವರಿಸಿದ್ದಾರೆ.

ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ವಿರುದ್ಧ ಆದಾಯ ಮೀರಿ ನೂರಾರು ಕೋಟಿ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿವೆ. ಯಡಿಯೂರಪ್ಪ ವಿರುದ್ಧ ಕೆ.ಎಸ್‌. ಈಶ್ವರ‍ಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಅಬಕಾರಿ ಹಗರಣದಲ್ಲಿ  ಸಚಿವ ಎಚ್‌. ನಾಗೇಶ್ ಅವರನ್ನು ಬದಲಾಯಿಸಲಾಗಿತ್ತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.