ಬೆಂಗಳೂರು: ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದರೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದ ಎಡಗೈ–ಬಲಗೈ ಸಮುದಾಯದವರಿಗೆ ಒಳಮೀಸಲಾತಿ ಕಲ್ಪಿಸುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೈಗೊಂಡಿದೆ.
ಅದೇ ಹೊತ್ತಿನಲ್ಲಿ, ಮುಸ್ಲಿಮರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡು, ಅದನ್ನು ಲಿಂಗಾಯತರಿಗೆ ಹಾಗೂ ಒಕ್ಕಲಿಗರಿಗೆ ತಲಾ ಶೇ 2ರಷ್ಟು ಹಂಚುವ ನಿರ್ಣಯವನ್ನೂ ಮಾಡಿದೆ. ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್) ಪಟ್ಟಿಗೆ ಸೇರಿಸುವ ನಿರ್ಧಾರವನ್ನೂ ಮಾಡಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ತಮ್ಮ ಸಚಿವ ಸಹೋದ್ಯೋಗಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬೊಮ್ಮಾಯಿ, ಸರ್ಕಾರದ ನಿರ್ಣಯಗಳನ್ನು ಪ್ರಕಟಿಸಿದರು.
ಆದರೆ, ಸರ್ಕಾರದ ನಿರ್ಣಯಕ್ಕೆ ಒಳಮೀಸಲಾತಿ ಹೋರಾಟಗಾರರು ಹಾಗೂ ಒಳಮೀಸಲಾತಿ ನೀಡುವುದನ್ನು ವಿರೋಧಿಸುತ್ತಿರುವ ಒಳಮೀಸಲಾತಿ ಸಂರಕ್ಷಣಾ ಸಮಿತಿಯ ಎರಡು ಗುಂಪುಗಳೂ ವಿರೋಧ ವ್ಯಕ್ತಪಡಿಸಿವೆ.
ರಾಜಕೀಯ ಮೀಸಲಾತಿ ಅನ್ವಯವಾಗುವ ಪ್ರವರ್ಗ 2 ಎ ಪಟ್ಟಿಗೆ ಸೇರಿಸಬೇಕು ಎಂದು ಲಿಂಗಾಯತ ಪಂಚಮಸಾಲಿ ಸಮುದಾಯದ ಒಂದು ಗುಂಪು ಆಗ್ರಹಿಸಿತ್ತು. 2 ಎ ಪಟ್ಟಿಯನ್ನು ಮುಟ್ಟದ ಸರ್ಕಾರ, ಪಂಚಮಸಾಲಿ ಸೇರಿದಂತೆ ಲಿಂಗಾಯತರ ಮೀಸಲಾತಿಯನ್ನು(ಈಗ ಪ್ರವರ್ಗ 2 ಡಿ– ಮೊದಲು ಪ್ರವರ್ಗ 3 ಬಿ ) ಶೇ 5ರಿಂದ ಶೇ 7ಕ್ಕೆ ಹಾಗೂ ಶೇ 12ರ ಮೀಸಲಾತಿಗೆ ಬೇಡಿಕೆ ಇಟ್ಟಿದ್ದ ಒಕ್ಕಲಿಗರಿಗೆ (ಈಗ ಪ್ರವರ್ಗ 2 ಸಿ–ಮೊದಲು ಪ್ರವರ್ಗ 3 ಎ) ಶೇ 4ರಿಂದ ಶೇ 6ಕ್ಕೆ ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ಮೂಲಕ ಇಲ್ಲಿಯವರೆಗೆ ಮೀಸಲಾತಿ ಸೌಲಭ್ಯದಿಂದ ವಂಚಿತರಾದ ಅಸ್ಪೃಶ್ಯ ಜಾತಿಗಳಿಗೆ ಸೇರಿದವರಿಗೆ ನ್ಯಾಯ ಒದಗಿಸಬೇಕು ಎಂದು ಮೂರು ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಳಮೀಸಲಾತಿ ಬಗ್ಗೆ ಬೇಡಿಕೆ ತೀವ್ರ ಗೊಂಡಿತ್ತು. ಇದಕ್ಕಾಗಿ ಪ್ರತ್ಯೇಕ ಆಯೋಗ ರಚಿಸುವ ಪ್ರಸ್ತಾವ ಸರ್ಕಾರದ ಮುಂದೆ ಇತ್ತು. ಬಳಿಕ ಅಸ್ತಿತ್ವಕ್ಕೆ ಬಂದ ಎನ್. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ, 2005ರಲ್ಲಿ ಈ ಅಧ್ಯಯನ ನಡೆಸಿ ಶಿಫಾರಸು ಮಾಡಲು ನ್ಯಾಯಮೂರ್ತಿ ಎ.ಜಿ. ಸದಾಶಿವ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ 15ರ ಮೀಸಲಾತಿಯನ್ನು ಎಡಗೈಗೆ ಶೇ 6, ಬಲಗೈಗೆ ಶೇ 5.5, ಸ್ಪೃಶ್ಯ ಉಪಜಾತಿಗಳಿಗೆ ಶೇ 3 ಹಾಗೂ ಈ ಮೂರೂ ಗುಂಪುಗಳಿಗೆ ಸೇರದ ಜಾತಿಗಳವರಿಗೆ ಶೇ 1ರಷ್ಟು ಮೀಸಲಾತಿ ನೀಡಬಹುದು ಎಂದು ಸದಾಶಿವ ಆಯೋಗವು 2012ರಲ್ಲಿದ್ದ ಡಿ.ವಿ. ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿತ್ತು.
ಒಳಮೀಸಲಾತಿ ಕಲ್ಪಿಸಬೇಕೆಂದು ಎಡಗೈ–ಬಲಗೈ ಸಮುದಾಯದವರು ಆಗ್ರಹಿಸುತ್ತಲೇ ಬಂದಿದ್ದರು. ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನೇಕ ಬಾರಿ ಚರ್ಚೆ ನಡೆಸಿತ್ತು. ಸಂಪುಟ ಸಭೆಯಲ್ಲೇ ಭಿನ್ನಮತ ಉಂಟಾಗಿದ್ದರಿಂದಾಗಿ, ಅನುಮೋದನೆ ನೀಡಿರಲಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಇದು ಒಂದು ಕಾರಣವಾಗಿತ್ತು.
ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿರ್ಣಯ ಕೈಗೊಂಡಿದೆ.
ಕ್ರಾಂತಿಕಾರಕ ನಿರ್ಧಾರ: ಬೊಮ್ಮಾಯಿ
‘ಎರಡು–ಮೂರು ದಶಕಗಳಿಂದಲೂ ಮೀಸಲಾತಿ ಪಟ್ಟಿ ಸೇರಿಸಬೇಕು, ಒಳಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇದೆ. ಎಲ್ಲ ಸಮುದಾಯಗಳ ಆಶೋತ್ತರ ಈಡೇರಿಸಲು ಮುಂದಾದರೆ ಜೇನುಗೂಡಿಗೆ ಕೈ ಹಾಕಿದಂತೆ ಎಂದು ಅನೇಕರು ಎಚ್ಚರಿಸಿದ್ದರು. ಸಮುದಾಯಗಳ ಬೇಡಿಕೆ ಹಾಗೂ ಹಿತವನ್ನು ಗಮನದಲ್ಲಿಟ್ಟುಕೊಂಡು ಒಳಮೀಸಲಾತಿ ನೀಡುವ ಕ್ರಾಂತಿಕಾರಕ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
‘ಮೀಸಲಾತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಮಿತಿ ರಚಿಸಲಾಗಿದ್ದರೂ ಕೆಲವು ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಂಡಿದ್ದರೆ ಕೆಲವನ್ನು ಜಾರಿ ಮಾಡಲು ಮುಂದಾಗಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಪರಿಶಿಷ್ಟ ಜಾತಿಯವರಿಗೆ ಇದ್ದ ಶೇ 15ರ ಮೀಸಲಾತಿಯನ್ನು ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದವರ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಏರಿಸಲಾಗಿತ್ತು. ಇದೀಗ ಮಹತ್ವದ ಮತ್ತೊಂದು ತೀರ್ಮಾನವನ್ನು ಕೈಗೊಂಡಿದ್ದೇವೆ. ಸರ್ಕಾರದ ನೇಮಕಾತಿ ಹಾಗೂ ಬಡ್ತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ’ ಎಂದರು.
‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಒಳ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಇತ್ತು. ಈ ಸಮುದಾಯದಲ್ಲಿ ಸ್ಪೃಶ್ಯರಾದ ಬಂಜಾರ, ಬೋವಿ, ಕೊರಮ, ಕೊರಚ ಸಮುದಾಯಯವರಲ್ಲಿ ತಮಗಿರುವ ಮೀಸಲಾತಿಯನ್ನೇ ತೆಗೆದು, ಅತಂತ್ರವಾಗುತ್ತೇವೆ ಎಂಬ ಭಯವಿತ್ತು. ಒಳಮೀಸಲಾತಿಗೆ ಸಂಬಂಧಿಸಿದ ವರದಿ ಪರಿಶೀಲಿಸಿ, ವರದಿ ನೀಡಲು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದೆವು. ಸದಾಶಿವ ಆಯೋಗದ ವರದಿಯನ್ನು ಆಧರಿಸಿ, ಸಚಿವ ಸಂಪುಟ ಉಪ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹಂಚಿಕೆ ಮಾಡಿದ್ದೇವೆ. 2011ರ ಜನಗಣತಿ ಆಧಾರದ ಮೇಲೆ ಜನಸಂಖ್ಯೆಗೆ ಆಧಾರವಾಗಿ ಮೀಸಲಾತಿಯನ್ನು ನಾಲ್ಕು ಹಂತಗಳಲ್ಲಿ ವರ್ಗೀಕರಣ ಮಾಡಲಾಗಿದೆ’ ಎಂದು ಅವರು ವಿವರಿಸಿದರು.
ಒಬಿಸಿ ಮೀಸಲಾತಿಯೂ ಬದಲು:
‘ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು 10 ವರ್ಷಗಳಿಗೊಮ್ಮೆ ಪರಿಶೀಲಿಸಬೇಕು ಎಂಬ ನಿಯಮವಿದೆ. ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದಲೂ ಇದು ನಡೆದಿರಲಿಲ್ಲ. ಒಬಿಸಿ ಪಟ್ಟಿಯ ಪರಿಷ್ಕರಣೆಯ ಅಧಿಕಾರವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಲಾಗಿದೆ. ಈ ಮೀಸಲಾತಿಯನ್ನು ಪರಿಷ್ಕರಿಸಲು ಆಯೋಗದ ಮಧ್ಯಂತರ ವರದಿ ಕೆಲವು ಶಿಫಾರಸು ಮಾಡಿತ್ತು. ಅಲ್ಲದೇ, ಎರಡೇ ವರ್ಗೀಕರಣ ಮಾಡುವಂತೆಯೂ ಹೇಳಿತ್ತು. ಅದನ್ನು ಆಧರಿಸಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ’ ಎಂದು ಬೊಮ್ಮಾಯಿ ಹೇಳಿದರು.
‘2 ಬಿಯಲ್ಲಿ ಮುಸ್ಲಿಮರಿದ್ದರು. ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಆದರೆ, ಈ ಸಮುದಾಯದವರನ್ನು ಕೈಬಿಟ್ಟರೆ ಅವರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿ, ಮುಸ್ಲಿಮರನ್ನು ಆರ್ಥಿಕವಾಗಿ ದುರ್ಬಲ ವರ್ಗದ ಪಟ್ಟಿಗೆ ಸೇರಿಸಲಾಗಿದೆ. 2 ಬಿಯಲ್ಲಿ ಶೇ 4ರಷ್ಟಿದ್ದ ಮೀಸಲಾತಿಯನ್ನು ಶೇ 2ರಷ್ಟು ಒಕ್ಕಲಿಗರಿಗೆ, ಶೇ 2ರಷ್ಟನ್ನು ಲಿಂಗಾಯತರಿಗೆ ಹಂಚುವ ತೀರ್ಮಾನ ಮಾಡಲಾಗಿದೆ’ ಎಂದರು.
ಕುರುಬರು ಎಸ್‌ಟಿ ಪಟ್ಟಿಗೆ: ‘ಕಾಡು ಕುರುಬ, ಬಂಡೆ ಕುರುಬ ಉಪಜಾತಿಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಇದೆ. ಅದರ ಬಗ್ಗೆಯೂ ಚರ್ಚೆ ನಡೆದಿದೆ. ನಾಲ್ಕು ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆದಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ನಡೆಯಬೇಕಿದೆ. ಶಿಫಾರಸು ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಬೊಮ್ಮಾಯಿ ಹೇಳಿದರು.
ಪಿಂಜಾರ, ನದಾಫರಿಗೆ ನಿಗಮ
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಪಿಂಜಾರ, ನದಾಫ, ಚಪ್ಪರ್‌ಬಂದ್ ಸೇರಿದಂತೆ 12 ಉಪಜಾತಿಗಳಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.