ಬೆಂಗಳೂರು: ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 1ರಿಂದ ಮುಷ್ಕರ ನಡೆಸಲಿದ್ದು, ನಗರದಲ್ಲಿ ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಸಾರ್ವಜನಿಕ ಸೇವೆಗಳು ಸ್ಥಗಿತವಾಗುವ
ಸಂಭವವಿದೆ.
‘ಬಿಬಿಎಂಪಿಯ ಕಂದಾಯ, ಎಂಜಿನಿಯರಿಂಗ್, ವೈದ್ಯ, ಶಿಕ್ಷಣ ಸೇರಿದಂತೆ ಎಲ್ಲ ಅಧಿಕಾರಿಗಳು, ನೌಕರರು, ಪೌರಕಾರ್ಮಿಕರೂ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಬುಧವಾರ ಬೆಳಿಗ್ಗೆ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಲಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಅಮೃತರಾಜ್ ತಿಳಿಸಿದರು.
ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಬಿಎಂಆರ್‌ಡಿಎ ಸೇರಿ ಬಹುತೇಕ ಇಲಾಖೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ನೌಕರರು ಹಾಜರಿರುವ ಸಂಭವ ತೀರಾ ಕಡಿಮೆಯಾಗಿದೆ. ಹೀಗಾಗಿ ನಾಗರಿಕರ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಪೌರಕಾರ್ಮಿಕರು ಕಾಯಂಗೆ ಭರವಸೆ: ಬಿಬಿಎಂಪಿಯ 16 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆಯನ್ನು ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ನೀಡಿರುವುದರಿಂದ ಪ್ರತಿಭಟನೆ ಕೈಬಿಡಲಾಗಿದೆ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘ ತಿಳಿಸಿದೆ. 'ಪೌರಕಾರ್ಮಿಕರನ್ನು ಕಾಯಂಗೊಳಿಸುವ ಕಡತ ಮುಖ್ಯಮಂತ್ರಿಯವರ ಮುಂದಿದೆ. ಇನ್ನೆರಡು ದಿನದಲ್ಲಿ ಅದಕ್ಕೆ ಒಪ್ಪಿಗೆ ನೀಡಲಾಗುತ್ತದೆ. ಒಂದೆರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ’ ಎಂದು ಸಿಎಂ ಕಾರ್ಯದರ್ಶಿ ಜಯರಾಂ ಭರವಸೆ ನೀಡಿದ್ದಾರೆ’ ಎಂದು ಸಂಘದವರು ಹೇಳಿದರು.
ಆಶಾ ಕಾರ್ಯಕರ್ತೆಯರ ಬೇಡಿಕೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 4 ತಿಂಗಳಿಂದ ಬಾಕಿ ಇರುವ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸದಸ್ಯರು ಆಗ್ರಹಿಸಿ, ಮಂಗಳವಾರ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ ಚಂದ್ರ ಅವರು ಮನವಿ ಸ್ವೀಕರಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.