ADVERTISEMENT

Karnataka Government Employees Strike | ಸಿಎಂ ಸಂಧಾನ ವಿಫಲ: ಮುಷ್ಕರ ಖಚಿತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 0:45 IST
Last Updated 1 ಮಾರ್ಚ್ 2023, 0:45 IST
   

ಬೆಂಗಳೂರು: ವೇತನ ಪರಿಷ್ಕರಣೆ, ಹೊಸ ಪಿಂಚಣಿ ನೀತಿ (ಎನ್‌ಪಿಎಸ್‌) ರದ್ದತಿ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ತಡ ರಾತ್ರಿ ನಡೆಸಿದ ಸಂಧಾನ ವಿಫಲವಾಗಿದೆ. ಹೀಗಾಗಿ, ಬುಧವಾರ ನೌಕರರು ಮುಷ್ಕರ ನಡೆಸುವುದು ಖಚಿತವಾಗಿದ್ದು, ಸರ್ಕಾರಿ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆ ಇದೆ.

‘ಏಳನೇ ವೇತನ ಆಯೋಗದಿಂದ ತಕ್ಷಣ ಮಧ್ಯಂತರ ವರದಿ ತರಿಸಿಕೊಂಡು ನೌಕರರಿಗೆ ಮಧ್ಯಂತರ ಪರಿಹಾರ ಘೋಷಿಸಲಾಗುವುದು‌. ಎನ್‌ಪಿಎಸ್ ರದ್ದತಿ ಹಾಗೂ ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸುವ ಸಂಬಂಧ ಉನ್ನತಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಈಗಾಗಲೇ ಎನ್‌ಪಿಎಸ್‌ ರದ್ದು ಮಾಡಿರುವ ರಾಜ್ಯಗಳಿಗೆ ಸಮಿತಿ ಭೇಟಿ ನೀಡಿ ತ್ವರಿತವಾಗಿ ವರದಿ ನೀಡಲು ಸೂಚಿಸಲಾಗುವುದು. ನಂತರ ಮುಂದಿನ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಭರವಸೆಗಳ ಕುರಿತು ಸಂಘದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಪದಾಧಿಕಾರಿಗಳು ತಿಳಿಸಿ ಸಭೆಯಿಂದ ಹೊರ ನಡೆದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ನೌಕರರ ಸಂಘದ ಪದಾಧಿಕಾರಿಗಳ ಜತೆ ಮಧ್ಯರಾತ್ರಿವರೆಗೂ ಸಭೆ ನಡೆಸಿದ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮುಖ್ಯಮಂತ್ರಿ ನೀಡಿದ ಭರವಸೆಗಳ ಕುರಿತ ಸಮಾಲೋಚನೆ ನಡೆಸಿದರು.

ಸರಣಿ ಸಭೆ: ಸರ್ಕಾರದ ಎಲ್ಲ ಇಲಾಖೆಗಳು ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ಹೂಡಲು ನಿರ್ಧರಿಸಿದ್ದರಿಂದ ಸರ್ಕಾರಿ ಸೇವೆ ವ್ಯತ್ಯಯವಾಗಲಿದೆ. ಫೆಬ್ರುವರಿ 22 ರಂದೇ ಮುಷ್ಕರ ನೋಟಿಸ್ ನೀಡಿದ್ದರೂ ಕೊನೆಯ ದಿನದವರೆಗೆ ಸುಮ್ಮನಿದ್ದ ಸರ್ಕಾರ, ಮುಷ್ಕರದ ಹಿಂದಿನ ದಿನವಷ್ಟೇ ಮಾತುಕತೆಗೆ ಮುಂದಾಯಿತು.

ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಅವರು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಮಂಗಳವಾರ ಬೆಳಿಗ್ಗೆ ನಡೆಸಿದ ಮಾತುಕತೆ ಮುರಿದುಬಿದ್ದಿತು. ಅದರ ಜತೆಗೆ ಹಣಕಾಸು ಇಲಾಖೆಯ ಅಧಿಕಾರಿಗಳು, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಜತೆಯೂ ಪದಾಧಿಕಾರಿಗಳು ಸಭೆ ನಡೆಸಿದರು. ಈ ಎಲ್ಲ ಸಭೆಗಳಲ್ಲೂ, ಸ್ವಲ್ಪ ಕಾಲಾವಕಾಶ ಕೊಟ್ಟರೆ ಬೇಡಿಕೆ ಈಡೇರಿಸಲು ಕ್ರಮವಹಿಸುವುದಾಗಿ ಹಿರಿಯ ಅಧಿಕಾರಿಗಳು ಭರವಸೆ ಕೊಟ್ಟರು.

ಅದಕ್ಕೆ ಪ್ರತಿಕ್ರಿಯಿಸಿದ ಷಡಾಕ್ಷರಿ, ‘ನಾವು ಈಗಾಗಲೇ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಕಾಲ ಮೀರಿದೆ. ಹಣಕಾಸು ಇಲಾಖೆ ವೇತನ ಪರಿಷ್ಕರಣೆ ಮತ್ತು ಎನ್‌ಪಿಎಸ್ ರದ್ದತಿ ಸಂಬಂಧ ಅಧಿಕೃತ ಆದೇಶ ಹೊರಡಿಸಲೇಬೇಕು. ಬೇರೆ ಯಾವುದಕ್ಕೂ ನಾವು ಒಪ್ಪುವು
ದಿಲ್ಲ. ಎಸ್ಮಾ ಹಾಕಿದರೂ ಜಗ್ಗುವುದಿಲ್ಲ’ ಎಂದು ಪ್ರತಿಪಾದಿಸಿದರು.

ರಾಜ್ಯ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಸಂಜೆ ಹೊತ್ತಿಗೆ ರಾಜಧಾನಿಗೆ ಮರಳಿದರು. ಹಿರಿಯ ಅಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಿದ ಅವರು, ನೌಕರರ ಮನವೊಲಿಸಲು ಸಂಧಾನ ಸೂತ್ರವೊಂದನ್ನು ಮುಂದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.