ಬೆಂಗಳೂರು: ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತಿ ತಾಲ್ಲೂಕಿಗೂ ಒಬ್ಬರು ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಬೌದ್ಧಿಕ ಪ್ರಗತಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು, ಮೇಲುಸ್ತುವಾರಿ ನೋಡಿಕೊಳ್ಳಲು ಕರ್ನಾಟಕ ಆಡಳಿತ ಸೇವೆಯ (ಕೆಎಎಸ್) ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳಾನ್ನಾಗಿ ನಿಯೋಜನೆ ಮಾಡಲಾಗಿದೆ.
ಗ್ಯಾರಂಟಿ ಯೋಜನೆಗಳ ಪರಿಶೀಲನೆ, ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡುವುದು, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸುವುದು. ಕುಂದು–ಕೊರತೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸುವುದು, ಮಕ್ಕಳಿಗೆ ನೀಡುವ ಪೌಷ್ಟಿಕಾಂಶ ವಿತರಣೆಯ ನಿರ್ವಹಣೆ ಮಾಡುವುದು, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಜಲಮೂಲಗಳ ಜೀರ್ಣೋದ್ಧಾರ, ಬಿತ್ತನೆಬೀಜ, ಗೊಬ್ಬರ ವಿತರಣೆ, ಉದ್ಯೋಗ ಖಾತ್ರಿ ಕಾಮಗಾರಿ, ಪಿಂಚಣಿ ಸೌಲಭ್ಯಗಳ ಪ್ರಗತಿ ಪರಿಶೀಲನೆ ನಡೆಸುವುದು, ದೌರ್ಜನ್ಯ ಪ್ರಕರಣಗಳನ್ನು ತಡೆಯುವುದೂ ಸೇರಿದಂತೆ 13 ವಿಚಾರಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ವಹಿಸಲಾಗಿದೆ.
ನಿಯೋಜನೆಗೊಂಡ ತಾಲ್ಲೂಕಿಗೆ ತಿಂಗಳಿಗೆ ಕನಿಷ್ಠ ಎರಡು ಬಾರಿ ಭೇಟಿ ನೀಡಬೇಕು. ಪರಿಶೀಲನಾ ವರದಿಯನ್ನು ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಗೆ ನೀಡಬೇಕು ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.