ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದಿಂದ ವಿಶ್ವದಾದ್ಯಂತ ಮರಣಗಳ ಸಂಖ್ಯೆ ಹೆಚ್ಚಾಗಿದೆ. ವಯೋಸಹಜ, ಮಾರಣಾಂತಿಕ ರೋಗ, ಅಪಘಾತ ಇತ್ಯಾದಿ ಕಾರಣಗಳಿಂದ ಮೃತಪಡುತ್ತಿರುವವರ ಜೊತೆಗೆ ಕೋವಿಡ್ ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಸೇರಿದ್ದರಿಂದ ಮರಣಗಳ ಸಂಖ್ಯೆ ಆತಂಕ ಮೂಡಿಸುತ್ತಿದೆ.
ಈ ನಡುವೆ ರಾಜ್ಯದಲ್ಲಿ ಪ್ರಸಕ್ತ ವರ್ಷದ ಮೊದಲ 6 ತಿಂಗಳಲ್ಲಿ ನೀಡಲಾದ ಮರಣ ಪ್ರಮಾಣ ಪತ್ರಗಳ ಸಂಖ್ಯೆಯಲ್ಲಿ 78 ಸಾವಿರ ಹೆಚ್ಚಳ ಕಂಡುಬಂದಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 20ರಷ್ಟು ಹೆಚ್ಚಿನ ಪ್ರಮಾಣವಾಗಿದೆ. ಆದರೆ ಇದು ಕೇವಲ ಮರಣ ಪ್ರಮಾಣ ಪತ್ರಗಳ ಸಂಖ್ಯೆಯಾಗಿದೆ. ಸತ್ತವರ ಸಂಖ್ಯೆಗೂ ಮರಣ ಪ್ರಮಾಣ ಪತ್ರಗಳ ಸಂಖ್ಯೆಗೂ ವ್ಯತ್ಯಾಸವಿದೆ.
2021ರ ಮೊದಲ 6 ತಿಂಗಳಲ್ಲಿ ಕರ್ನಾಟಕ ಸರ್ಕಾರ ನೀಡಿದ ಮರಣ ಪ್ರಮಾಣ ಪತ್ರಗಳ ಸಂಖ್ಯೆಯು 78,000ಕ್ಕೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಸತ್ತವರ ಪ್ರಮಾಣ ಪತ್ರಗಳ ಸಂಖ್ಯೆ ಭಾರಿ ಹೆಚ್ಚಿರುವುದು ಕಂಡುಬಂದಿದೆ. ಕರ್ನಾಟಕದಲ್ಲಿ ಕೋವಿಡ್-19 ಕಾರಣದಿಂದ ಸತ್ತವರ ಸಂಖ್ಯೆಗೂ ಸರ್ಕಾರ ಬಿಡುಗಡೆ ಮಾಡಿರುವ ಸಾವಿನ ಸಂಖ್ಯೆಗೂ ವ್ಯತ್ಯಾಸವಿರುವ ಬಗ್ಗೆ ಪ್ರಶ್ನೆ ಕೇಳಿದಾಗ ಸರ್ಕಾರದಿಂದ ಈ ಉತ್ತರ ಲಭ್ಯವಾಗಿದೆ.
ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್‌ಎಸ್) ಪ್ರಕಾರ ಪಸಕ್ತ ವರ್ಷ ಜನವರಿ 1ರಿಂದ ಜೂನ್ 15ರ ವರೆಗೆ ರಾಜ್ಯದಾದ್ಯಂತ 3,37,580 ಮರಣ ಪ್ರಮಾಣ ಪತ್ರಗಳನ್ನು ನೀಡಿದೆ. ಇದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 87,082 ಮರಣ ಪ್ರಮಾಣ ಪತ್ರಗಳು ಸೇರಿವೆ. ಗುರುವಾರ ಒಂದು ದಿನದಲ್ಲಿ ರಾಜ್ಯದಾದ್ಯಂತ ನೀಡಲಾದ ಮರಣ ಪ್ರಮಾಣ ಪತ್ರಗಳ ಸಂಖ್ಯೆ 4,302.
2018 ಮತ್ತು 2019ರ ಮೊದಲ 6 ತಿಂಗಳಲ್ಲಿ ರಾಜ್ಯದಾದ್ಯಂತ ನೀಡಲಾದ ಮರಣ ಪ್ರಮಾಣ ಪತ್ರಗಳ ಸಂಖ್ಯೆ ಕ್ರಮವಾಗಿ 2.56 ಲಕ್ಷ ಮತ್ತು 2.67 ಲಕ್ಷ ಇದೆ. 2017ಕ್ಕೆ ಹೋಲಿಸಿದಾಗ 2018ರಲ್ಲಿ ಸಾವಿನ ಪ್ರಮಾಣ ಪತ್ರಗಳು ಶೇಕಡಾ 1.3ರಷ್ಟು ಹೆಚ್ಚಾಗಿವೆ. 2019ರಲ್ಲಿ ಇದರ ಪ್ರಮಾಣ ಶೇಕಡಾ 4.2ಕ್ಕೆ ಏರಿಕೆಯಾಗಿದೆ. 2020ರ ಅಧಿಕೃತ ಮಾಹಿತಿ ಇನ್ನು ಲಭ್ಯವಾಗಿಲ್ಲ. ಆದರೆ ಸಿಕ್ಕಿರುವ ಮಾಹಿತಿ ಪ್ರಕಾರ 2020ರಲ್ಲಿ ಶೇಕಡಾ 5ರಷ್ಟು ಹೆಚ್ಚು ಸಾವಿನ ಪ್ರಮಾಣ ಪತ್ರಗಳನ್ನು ನೀಡಿರಬಹುದು ಎನ್ನಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಕಳೆದ ವರ್ಷ 2.75-2.8 ಲಕ್ಷ ಮರಣ ಪ್ರಮಾಣ ಪತ್ರಗಳನ್ನು ನೀಡಿರಬಹುದು ಎಂದು ಅಂದಾಜಿಸಲಾಗಿದೆ.
ಹಿಂದಿನ ವರ್ಷ 2.8 ಲಕ್ಷ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗಿದೆ ಎಂದು ಗ್ರಹಿಸಿದರೆ ಈ ವರ್ಷ ಶೇಕಡಾ 20ರಷ್ಟು ಹೆಚ್ಚಳ ಕಂಡುಬಂದಿದೆ.
''ಆಸ್ತಿ ಹಂಚಿಕೆ ಅಥವಾ ಇತರ ಕೌಟುಂಬಿಕ ವ್ಯವಹಾರಗಳಿಗೆ ಮರಣ ಪ್ರಮಾಣ ಪತ್ರಗಳನ್ನು ಹೆಚ್ಚಾಗಿ ಸ್ವೀಕರಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಕಳೆದ ವರ್ಷ ಸಂಭವಿಸಿದ ಸಾವಿಗೆ ಈ ವರ್ಷ ಪ್ರಮಾಣ ಪತ್ರ ಪಡೆಯುತ್ತಾರೆ'' ಎಂದು ಜನನ ಮತ್ತು ಮರಣ ದಾಖಲಾತಿಯ ಸಹಾಯಕ ಅಧಿಕಾರಿ ಎಂ ಬಿ ಮಧು ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ನೀಡಲಾದ ಮರಣ ಪ್ರಮಾಣ ಪತ್ರಗಳಲ್ಲಿ ಶೇಕಡಾ 5.23ರಷ್ಟು ನಕಲಿ. ಶೇಕಡಾ 32ರಷ್ಟು ಕಳೆದ ವರ್ಷ ಸಂಭವಿಸಿದ ಸಾವಿಗೆ ಪ್ರಮಾಣ ಪತ್ರ ಸ್ವೀಕರಿಸಲು ತಡ ಮಾಡಿದ್ದಾರೆ ಎಂಬುದು ದತ್ತಾಂಶ ವಿಶ್ಲೇಷಣೆಯಲ್ಲಿ ಕಂಡುಬಂದಿರುವುದಾಗಿ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಸರ್ಕಾರಗಳಿಂದ ಲಭ್ಯವಿರುವ ಪರಿಹಾರ ಮತ್ತಿತರ ಸೌಲಭ್ಯಕ್ಕಾಗಿ ಮರಣಗಳನ್ನು ನೋಂದಾಯಿಸಿ ಪ್ರಮಾಣ ಪತ್ರಗಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಹಜವಾಗಿ ಸಂಖ್ಯೆಗಳಲ್ಲಿ ಹೆಚ್ಚು ಕಂಡುಬರುತ್ತದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.