ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮದೇ ಸಂಪುಟದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿದ್ದಾರೆ ಅವರ ವಿರುದ್ಧ ಏನು ಕ್ರಮ ಕೈಗೊಳ್ಳುವಿರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಚೆಲುವರಾಯಸ್ವಾಮಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಶಾಸಕರ ಪತ್ರ ನಕಲು ಎಂದಿದ್ದ ನೀವು, ಈಗ ನಿಮ್ಮ ಸಚಿವರ ಕರ್ಮಕಾಂಡ ಬಯಲು ಮಾಡುವ ಪತ್ರವೂ ನಕಲು ಎನ್ನುತ್ತಿರೋ ಹೇಗೆ...?, ನೀವು ಈ ಕೂಡಲೇ ಭ್ರಷ್ಟ ಸಚಿವರ ರಾಜೀನಾಮೆ ಪಡೆದುಕೊಳ್ಳಬೇಕು ಅಥವಾ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು’ ಎಂದು ಬಿಜೆಪಿ ಒತ್ತಾಯಿಸಿದೆ.
ಓದಿ... ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚದ ಆರೋಪ: ತನಿಖೆಗೆ ಒತ್ತಾಯ
ಕೃಷಿ ಸಚಿವರ ಮೇಲೆ ಲಂಚದ ಆರೋಪ; ತನಿಖೆಗೆ ಒತ್ತಾಯ
ಮಂಡ್ಯ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಲಂಚದ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಇಲಾಖೆಯ 7 ಮಂದಿ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕ್ರಮ ವಹಿಸುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಚಲುವರಾಯಸ್ವಾಮಿ ಅವರು ₹ 8– ₹10 ಲಕ್ಷದವರೆಗೆ ಲಂಚ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಲಂಚಕ್ಕೆ ಕಡಿವಾಣ ಹಾಕದಿದ್ದರೆ ನಾವು ಹಾಗೂ ನಮ್ಮ ಕುಟುಂಬ ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರದಲ್ಲಿ ದೂರಿದ್ದಾರೆ. ಈ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಕೋರುತ್ತೇನೆ’ ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜಿ.ಪ್ರದೀಪ್ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ ‘ಕೆಲವರು ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ, ಹಿಂದೆ ಬಸ್ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣದಲ್ಲೂ ಇದೇ ರೀತಿ ಕುತಂತ್ರ ಮಾಡಿದ್ದರು. ಇದೊಂದು ನಕಲಿ ಪತ್ರವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಆದರೂ ಪತ್ರದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.
‘ಕೃಷಿ ಇಲಾಖೆ ಜಂಟಿ ನಿರ್ದೇಶಕ ಈಗಾಗಲೇ ಸಹಾಯಕ ನಿರ್ದೇಶಕರ ಜೊತೆ ಆನ್‌ಲೈನ್ ಸಭೆ ನಡೆಸಿದ್ದಾರೆ. ಯಾರೂ ಕೂಡ ಈ ರೀತಿ ಪತ್ರ ಬರೆದಿಲ್ಲ ಎಂದು ತಿಳಿಸಿರುವ ಮಾಹಿತಿ ಸಿಕ್ಕಿದೆ. ಪ್ರಾಥಮಿಕ ತನಿಖೆಯಿಂದ ಅದೊಂದು ನಕಲಿ ಪತ್ರ ಎಂದು ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಸೂಚಿಸಿದ್ದೇನೆ’ ಎಂದರು.
ಓದಿ... ಈ 10 ಪ್ರಶ್ನೆಗಳಿಗೆ ಉತ್ತರಿಸಿ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಸವಾಲು
ಬಿಜೆಪಿ ಆರೋಪ: ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ‘ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಗರಿಷ್ಠ ಮಟ್ಟ ತಲುಪಿದೆ. ಹಣ ಕೊಟ್ಟವರಿಗೆ ಹುದ್ದೆಗಳನ್ನು ಹರಾಜು ಹಾಕಲಾಗುತ್ತಿದೆ’ ಎಂದು ಆರೋಪಿಸಿದ್ಧಾರೆ.
ಪತ್ರ ಬರೆದಿಲ್ಲ; ಜೆಡಿ ಸ್ಪಷ್ಟನೆ
ಸ್ಪಷ್ಟನೆ ನೀಡಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ‘ನಮ್ಮ ಇಲಾಖೆಯ ಸಹಾಯಕ ನಿರ್ದೇಶಕರು ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ, ನಮ್ಮ ಜಿಲ್ಲೆಯಿಂದ ಯಾವುದೇ ದೂರು ರಾಜ್ಯಪಾಲರ ಕಚೇರಿಗೆ ಹೋಗಿಲ್ಲ’ ಎಂದು ತಿಳಿಸಿದರು.
‘ಎಲ್ಲಾ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ, ಕೃಷಿ ಸಚಿವರ ವಿರುದ್ಧ ಪತ್ರ ಬರೆದಿಲ್ಲ ಎಂದು ಎಲ್ಲರೂ ತಿಳಿಸಿದ್ಧಾರೆ. ಈ ಬಗ್ಗೆ ಸಚಿವರು ವಿವರಣೆ ಕೋರಿದ್ದರು. ನಮ್ಮ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿಲ್ಲ ಎಂದು ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.