ADVERTISEMENT

ಜಲಜೀವನ್‌ ಮಿಷನ್‌: ₹1,225 ಕೋಟಿ ಬಳಸದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 16:28 IST
Last Updated 7 ಆಗಸ್ಟ್ 2023, 16:28 IST
   

ನವದೆಹಲಿ: ಗ್ರಾಮೀಣ ‍ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೊಳಿಸುತ್ತಿರುವ ಜಲ ಜೀವನ್‌ ಮಿಷನ್‌ಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಪೈಕಿ ₹1,225 ಕೋಟಿವನ್ನು ಕರ್ನಾಟಕ ಸರ್ಕಾರ ಬಳಕೆಯೇ ಮಾಡಿಲ್ಲ. 

ರಾಜ್ಯಸಭೆಯಲ್ಲಿ ಸದಸ್ಯ ಕೆ.ಆರ್‌.ಎನ್‌.ರಾಜಶೇಖರ್‌ ಸೋಮವಾರ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ‍ಪ್ರಲ್ಹಾದ ಸಿಂಗ್‌ ಪಟೇಲ್‌, ‘ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳು ₹16,484 ಕೋಟಿ ಕೇಂದ್ರದ ಅನುದಾನವನ್ನು ಬಳಸಿಲ್ಲ’ ಎಂದು ತಿಳಿಸಿದರು. 

‘ನೀರಾವರಿ ಯೋಜನೆಗಳನ್ನು ಯೋಜಿಸುವ, ಅನುಷ್ಠಾನ, ಕಾರ್ಯಾಚರಣೆ ಹಾಗೂ ನಿರ್ವಹಣೆ ಮಾಡುವ ಹೊಣೆ ರಾಜ್ಯಗಳದ್ದು. ರಾಜ್ಯದ ಈ ಯೋಜನೆಗಳಿಗೆ ಕೇಂದ್ರ ಸರ್ಕಾರವು ತಾಂತ್ರಿಕ ಹಾಗೂ ಆರ್ಥಿಕ ನೆರವು ನೀಡುತ್ತದೆ. ರಾಜ್ಯ ಸರ್ಕಾರಗಳಿಗೆ ಹಣಕಾಸು ಸಚಿವಾಲಯದ ಮೂಲಕ ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು ನೀಡಲಾಗುತ್ತಿದೆ. ಇದು 50 ವರ್ಷಗಳ ಬಡ್ಡಿರಹಿತ ಸಾಲ. 2023–24ನೇ ಸಾಲಿನಲ್ಲಿ ರಾಜ್ಯಗಳಿಗೆ ₹1.30 ಲಕ್ಷ ಕೋಟಿ ಮೀಸಲಿಡಲಾಗಿದೆ. ಈ ಪೈಕಿ ಭಾಗ 1ರಲ್ಲಿ ₹1 ಲಕ್ಷ ಕೋಟಿ ಮೀಸಲಿಡಲಾಗಿದೆ. ಭಾಗ 1 ಅಡಿ ಹಂಚಿಕೆಯಾದ ನಿಧಿಯ ಶೇ 20 ಮೊತ್ತವನ್ನು ಜಲಜೀವನ್‌ ಮಿಷನ್‌ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ರಾಜ್ಯ ಸರ್ಕಾರಗಳು ಬಳಸಿಕೊಳ್ಳಬಹುದು’ ಎಂದು ಹೇಳಿದರು. 

ADVERTISEMENT

5,048 ಹೆಕ್ಟೇರ್ ಅರಣ್ಯ ಬಳಕೆ:

ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ದೇಶದಲ್ಲಿ 2008ರಿಂದ ಇಲ್ಲಿಯವರೆಗೆ ಅರಣ್ಯೇತರ ಉದ್ದೇಶಕ್ಕೆ 3.05 ಲಕ್ಷ ಹೆಕ್ಟೇರ್‌ ಅರಣ್ಯ ಬಳಸಲು ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತಿಳಿಸಿದೆ. 

ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ವರುಣ್‌ ಗಾಂಧಿ ಸೋಮವಾರ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್‌, ‘17,301 ಯೋಜನೆಗಳಿಗೆ ಈ ಭೂಮಿ ಬಳಸಲು ಒಪ್ಪಿಗೆ ನೀಡಲಾಗಿದೆ. ಕರ್ನಾಟಕದಲ್ಲಿ 15 ವರ್ಷಗಳಲ್ಲಿ 5,048 ಹೆಕ್ಟೇರ್ ಅರಣ್ಯವನ್ನು ವಿವಿಧ ಯೋಜನೆಗಳಿಗೆ ಬಳಸಲಾಗಿದೆ’ ಎಂದು ತಿಳಿಸಿದರು. 

ಇದೇ ಅವಧಿಯಲ್ಲಿ ದೇಶದಲ್ಲಿ ಕಡ್ಡಾಯ ಅರಣ್ಯೀಕರಣಕ್ಕೆ 9.34 ಲಕ್ಷ ಹೆಕ್ಟೇರ್‌ ಭೂಮಿ ಬಳಸಲಾಗಿದೆ. ಈ ಯೋಜನೆಯಡಿ ಕರ್ನಾಟಕದಲ್ಲಿ 10,543 ಹೆಕ್ಟೇರ್‌ನಲ್ಲಿ ಅರಣ್ಯ ಬೆಳೆಸಲಾಗಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.