ಬೆಂಗಳೂರು: ಜೀವ ವೈವಿಧ್ಯದ ತಾಣವಾಗಿರುವ, ಬೆಂಗಳೂರಿಗೆ ಹೊಂದಿಕೊಂಡೇ ಇರುವ ದೇವಿಕಾ ರಾಣಿ-ರೋರಿಚ್ ಎಸ್ಟೇಟ್‌ನಲ್ಲಿ ಫಿಲಂಸಿಟಿ ನಿರ್ಮಿಸುವ ಸರ್ಕಾರದ ಪ್ರಸ್ತಾವಕ್ಕೆ ಪರಿಸರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ‘ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿತ್ರ ನಗರಿ (ಫಿಲಂ ಸಿಟಿ) ನಿರ್ಮಿಸಲು ನಿರ್ಧರಿಸಲಾಗಿದೆ,’ ಎಂದು ಹೇಳಿದ್ದರು. ಆದರೆ, ‘ಫಿಲಂಸಿಟಿ ನಿರ್ಮಿಸಲು ಆನೆಗಳು ಸಂಚರಿಸುವ ದಾರಿಯೇ ಬೇಕೆ?’ ಎಂಬ ಕೂಗು ಸದ್ಯ ಕೇಳಿ ಬಂದಿದೆ. ಈ ಕುರಿತು ಸಾಮಾಜಿಕ ತಾಣಗಳಲ್ಲೂ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ: ‘ರೋರಿಚ್ ಎಸ್ಟೇಟ್‌ನಲ್ಲಿ ಫಿಲಂ ಸಿಟಿ’
ಎಸ್ಟೇಟ್‌ನಲ್ಲಿಫಿಲಂ ಸಿಟಿ ನಿರ್ಮಿಸಿದ್ದೇ ಆದರೆ ಪರಿಸರದ ಆಪಾಯ ಎದುರಾಗಲಿದೆ ಎಂದು ಹಲವರುಅಭಿಪ್ರಾಯಪಟ್ಟಿದ್ದಾರೆ.
ದೇವಿಕಾ ರಾಣಿ ಮತ್ತು ರೋರಿಚ್ ಎಸ್ಟೇಟ್ 468 ಎಕರೆಗಳಷ್ಟು ವಿಸ್ತಾರವಾಗಿದ್ದು, ಅದರಲ್ಲಿ 100 ಎಕರೆ ಭಾಗವನ್ನು ರಾಜ್ಯ ಅರಣ್ಯ ಇಲಾಖೆ ಸುಪರ್ದಿಗೆ ತೆಗೆದುಕೊಂಡು ನಿರ್ವಹಿಸುತ್ತಿದೆ. ಬನ್ನೇರುಘಟ್ಟ ವನ್ಯಧಾಮ ಮತ್ತು ಮಾಗಡಿಯ ಸಾವನದುರ್ಗದ ನಡುವೆ ಇರುವ ದೇವಿಕಾ ರಾಣಿ ಮತ್ತು ರೋರಿಚ್ ಎಸ್ಟೇಟ್ ಅದರ ಐತಿಹಾಸಿಕ ಹಿನ್ನೆಲೆಯ ಕಾರಣಕ್ಕೋ ಏನೋ ಅಲ್ಪಸ್ವಲ್ಪ ಹಾನಿಯ ನಡುವೆಯೂಹಸಿರಾಗಿಯೇ ಉಳಿದಿದೆ.
ಹೆಸರಿಗಷ್ಟೇ ಎಸ್ಟೇಟ್ ಎನಿಸಿಕೊಳ್ಳುವ ಈ ಪ್ರದೇಶ ಸಣ್ಣ ಅರಣ್ಯವೇ ಸರಿ. ಇಲ್ಲಿ ಕೆಲ ಸಣ್ಣ ಕೆರೆಗಳಿದ್ದು, ಇದೇ ಮಾರ್ಗವಾಗಿ ಸಾಗುವ ಆನೆಗಳು, ವನ್ಯಮೃಗಗಳು ನೀರು ಕುಡಿದು, ಒಂದರೆಡು ದಿನ ಅಲ್ಲೇ ಉಳಿದು ಮುಂದೆ ಹೋಗುತ್ತವೆ. ಇದರ ಜತೆಗೆ, ಚಿರತೆ, ಜಿಂಕೆ, ಕಾಡುಹಂದಿ, ನವಿಲುಗಳು ಎಸ್ಟೇಟ್‌ನ ಅರಣ್ಯದಲ್ಲಿ ನೆಲೆಸಿವೆ.
ಇದನ್ನೂ ಓದಿ:ರೋರಿಚ್ ಎಸ್ಟೇಟ್: 17 ಎಕರೆ ಒತ್ತುವರಿ
‘ಬೆಂಗಳೂರಿನ ಹೊರವಲಯದಲ್ಲಿ ಪರಿಸರಕ್ಕೆ ಹಾನಿಯಾಗದೇ ಯಥಾಸ್ಥಿತಿಯಲ್ಲಿಉಳಿದಿರುವ ಪ್ರದೇಶ ಇದೊಂದೇ. ಇಲ್ಲಿ ವನ್ಯಜೀವಿಗಳು ನೆಲೆಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದು ವೇಳೆ ಮಾನವರ ಹಸ್ತಕ್ಷೇಪ ಉಂಟಾದರೆ ಜೀವ ವೈವಿಧ್ಯಕ್ಕೆ ಅಪಾಯವಿದೆ,’ ಎಂದು ಹೆಸರು ಹೇಳಲಿಚ್ಚಿಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಆಂಗ್ಲಪತ್ರಿಕೆ ದಿ ಹಿಂದು ವರದಿ ಮಾಡಿದೆ.
ಅಧಿಕಾರಿ ಹೇಳಿದಂತೆ ಮಾನವರ ಹಸ್ತಕ್ಷೇಪ ಉಂಟಾಗಿ ಜೀವ ವೈವಿಧ್ಯಕ್ಕೆಹಾನಿಯಾಗಿದ್ದೇ ಆದರೆ, ಈ ವ್ಯಾಪ್ತಿಯಲ್ಲಿ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಏರ್ಪಡುವ ಆತಂಕವಿದೆ.
ಚಿತ್ರ ನಗರಿ ಹೆಸರಿನಲ್ಲಿ ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದರೆ ಇಲ್ಲಿನ ಜೀವ ವೈವಿಧ್ಯ ನಾಶವಾಗಲಿದೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ತಾಣದಲ್ಲೂ ವಿರೋಧ
ಇನ್ನು ಸರ್ಕಾರದ ಈ ನಿರ್ಧಾರಕ್ಕೆ ಸಾಮಾಜಿಕ ತಾಣಗಳಲ್ಲಿಯೂ ವಿರೋಧ ವ್ಯಕ್ತವಾಗಿದೆ, ಇದೊಂದು ಮೂರ್ಖತನದ, ದುರುದ್ದೇಶಪೂರಿತ ಯೋಜನೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಫಿಲಂಸಿಟಿ ನಿರ್ಮಿಸಲುರಾಮನಗರ, ಮೈಸೂರಿನಲ್ಲಿ ಸ್ಥಳ ನಿಗದಿಯಾಗಿದೆ. ರೋರಿಚ್ ಎಸ್ಟೇಟ್ ಅನ್ನು ಫಿಲಂ ಸಿಟಿಗೆ ಬಳಸಬೇಡಿ ಎಂದು ಒತ್ತಾಯಿಸಿದ್ದಾರೆ.
ರೋರಿಚ್ ಎಸ್ಟೇಟ್ ಹಿನ್ನೆಲೆ ಏನು?
20ನೇ ಶತಮಾನದ ರಷ್ಯಾದ ಪ್ರಖ್ಯಾತ ಚಿತ್ರ ಕಲಾವಿದ ಸ್ವೆಟೊಸ್ಲಾವ್ ನಿಕೋಲೇವಿಚ್ ರೋರಿಚ್ ಅವರು ಹಿಂದಿ ಚಿತ್ರ ರಂಗದ ಪ್ರಖ್ಯಾತ ನಟಿ ದೇವಿಕಾ ರಾಣಿ ಅವರನ್ನು ವಿವಾಹವಾಗಿ ಕರ್ನಾಟಕಕ್ಕೆ ಬಂದು, ಬೆಂಗಳೂರು ಹೊರವಲಯದ ಕನಕಪುರ ರಸ್ತೆಯ ತಾತಗುಣಿ ಸಮೀಪ ಎಸ್ಟೇಟ್ ಖರೀದಿಸಿ ಅಲ್ಲಿಯೇ ನೆಲೆಸಿದ್ದರು.
ಸ್ಥಳೀಯವಾಗಿ ಇದನ್ನು ತಾತಗುಣಿ ಎಸ್ಟೇಟ್ ಎಂದೂ ಕರೆಯಲಾಗುತ್ತದೆ. ದಂಪತಿ ಇದೇ ಎಸ್ಟೇಟ್‌ನಲ್ಲೇ ಕೊನೆಯುಸಿರೆಳೆದಿದ್ದರು. ನಂತರ ಅವರ ಸಹಾಯಕಿ ಈ ಎಸ್ಟೇಟ್ ಅನ್ನು ಕಬಳಿಸುವ ಹುನ್ನಾರ ನಡೆಸಿದ್ದರಾದರೂ, ಕರ್ನಾಟಕ ಸರ್ಕಾರ ಕಾನೂನು ಹೋರಾಟದಲ್ಲಿ ಗೆದ್ದು ಎಸ್ಟೇಟ್ ಅನ್ನು ಸುಪರ್ದಿಗೆ ಪಡೆದುಕೊಂಡಿದೆ. 2017ರಲ್ಲಿ ರಾಜ್ಯ ಸರ್ಕಾರ ಇಲ್ಲಿ ಮ್ಯೂಸಿಯಂ ನಿರ್ಮಿಸುವ ಯೋಜನೆಯನ್ನೂಹಾಕಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.