ಬೆಂಗಳೂರು: ‘ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದ ವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿಆರು ವಾರಗಳ ಒಳಗೆ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ಸೈಯದ್ ಗೌಸ್ ಮೊಹಿಯುದ್ದೀನ್ ಷಾ ಖಾದ್ರಿ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ‘ಏಕಸದಸ್ಯ ನ್ಯಾಯಪೀಠದ ಆದೇಶದಂತೆ ರಾಜ್ಯ ಸರ್ಕಾರ ಮೂವರು ಸಚಿವರನ್ನು ಒಳಗೊಂಡ ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ. ಈ ಉಪ ಸಮಿತಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಗೃಹ ಹಾಗೂ ಮುಜರಾಯಿ ಇಲಾಖೆ ಸಚಿವರಿದ್ದಾರೆ. ಈ ಸಮಿತಿಯು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು ಸಂಬಂಧಿಸಿದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿದೆ’ ಎಂದರು.
ಏತನ್ಮಧ್ಯೆ ಮೇಲ್ಮನವಿದಾರರ ಪರ ವಕೀಲರು, ‘ಸ್ಥಳದಲ್ಲಿ ಯಥಾರೀತಿ ಜಾತ್ಯತೀತ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿಸಬೇಕು‘ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿ ನಾವದಗಿ ಅವರು, ‘ಸಚಿವ ಸಂಪುಟದ ಉಪ ಸಮಿತಿಯ ನಿರ್ಣಯ ಸಲ್ಲಿಕೆಯಾಗುವ ತನಕ ವಿವಾದ ಪೂಜಾ ಸ್ಥಳದ ಧಾರ್ಮಿಕ ಚಟುವಟಿಕೆಗಳ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪವೂ ಮಾಡುವುದಿಲ್ಲ. ಈಗಿರುವುದನ್ನು ಬದಲಿಸುವುದೂ ಇಲ್ಲ. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಆರು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಆದ್ದರಿಂದ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಬೇಕು’ ಎಂದು ಮನವಿ ಮಾಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿದೆ. ‘ರಾಜ್ಯ ಸರ್ಕಾರ ಸಲ್ಲಿಸುವ ನಿರ್ಣಯವು ಮೇಲ್ಮನವಿಯ ಅಂತಿಮ ಫಲಿತಾಂಶಕ್ಕೆ ಒಳಪಡಲಿದೆ. ಸರ್ಕಾರದ ನಿರ್ಣಯದ ಬಗ್ಗೆ ಆಕ್ಷೇಪ ಎತ್ತಲು ಉಭಯ ಪಕ್ಷಗಾರರು ಮುಕ್ತರಾಗಿರುತ್ತಾರೆ. ವಿವಾದಿತ ಸ್ಥಳದಲ್ಲಿ ಈಗಿರುವ ಸ್ಥಿತಿಯಲ್ಲಿ ಏನಾದರೂ ಬದಲಾವಣೆಯಾದರೆ ಆ ಬಗ್ಗೆ ಸೂಕ್ತ ಮನವಿ ಸಲ್ಲಿಸಲು ಪಕ್ಷಗಾರರು ಸ್ವತಂತ್ರರಿದ್ದಾರೆ’ ಎಂದೂ ನ್ಯಾಯಪೀಠ ಹೇಳಿದೆ.
ಬಾಬಾಬುಡನ್ ಗಿರಿ ಇನಾಂ ದತ್ತಾತ್ರೇಯ ಪೀಠದ ಪೂಜಾ ಕೈಂಕರ್ಯ ನೇರವೇರಿಸಲು ಮುಜಾವರ್ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.