ADVERTISEMENT

ಹಂಪಿ ವಿಶ್ವವಿದ್ಯಾಲಯ: ಅನುಮೋದಿಸದೆ ನೇಮಕಾತಿ ಮಾಡಿದ್ದು ಏಕೆ -ರಾಜ್ಯಪಾಲರು

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಖಾರವಾಗಿ ಪ್ರಶ್ನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಮಾರ್ಚ್ 2022, 19:46 IST
Last Updated 23 ಮಾರ್ಚ್ 2022, 19:46 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ‘ನನ್ನ ಅನುಮೋದನೆ ಪಡೆಯದೇ ನೇಮಕಾತಿ ಮಾಡಿದ್ದು ಏಕೆ?’ – 2017–18ನೇ ಸಾಲಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮೇಲಿನಂತೆ ಖಾರವಾಗಿ ಪ್ರಶ್ನಿಸಿದ್ದಾರೆ. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ನನ್ನ ಅನುಮೋದನೆ ನಿರೀಕ್ಷಿಸಿ ಆದೇಶ ಹೊರಡಿಸಲು ಕಾರಣಗಳೇನು? ಈಗೇಕೇ ನನ್ನ ಅನುಮೋದನೆಗೆ ಕಡತ ಕಳುಹಿಸಿದ್ದೀರಿ? ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ್ಯಾವ ಸಮಿತಿಗಳಿದ್ದವು? ಆ ಸಮಿತಿಗಳು ಏನೇನು ವರದಿ ಕೊಟ್ಟಿವೆ? ಈ ಕುರಿತು ಅಗತ್ಯ ದಾಖಲೆಗಳೊಂದಿಗೆ ಮಾಹಿತಿ ಸಲ್ಲಿಸಬೇಕು’ ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.

2017–18ನೇ ಸಾಲಿನಲ್ಲಿ ಕನ್ನಡ ವಿ.ವಿ.ಯಲ್ಲಿ ಸಂವಿಧಾನದ 371 (ಜೆ) ಅಡಿ 9 ಬೋಧಕ, 5 ಬೋಧಕೇತರ ಹುದ್ದೆಗಳನ್ನು ತುಂಬಲಾಗಿತ್ತು. ಆದರೆ, ಅದಕ್ಕೆ ಅನುಮೋದನೆಯೇ ಪಡೆದಿರಲಿಲ್ಲ ಎನ್ನುವುದು ರಾಜ್ಯಪಾಲರು ಬರೆದಿರುವ ಪತ್ರದಿಂದ ಬಹಿರಂಗಗೊಂಡಿದೆ.

ADVERTISEMENT

ಏಳು ಜನರ ನೇಮಕಾತಿ ನಿಯಮಬಾಹಿರ:ನೇಮಕಾತಿ ಬಗ್ಗೆ ರಾಜ್ಯಪಾಲರು ಒಂದೆಡೆ ತಕರಾರು ತೆಗೆದರೆ, ನೇಮಕಾತಿ ಪ್ರಕ್ರಿಯೆಗಳ ಪರಿಶೀಲನೆಗೆ ರಚಿಸಲಾಗಿದ್ದ ಸಮಿತಿಯು ಬಹುತೇಕ ಅಭ್ಯರ್ಥಿಗಳ ನೇಮಕಾತಿ ನಿಯಮಬಾಹಿರವಾಗಿ ನಡೆದಿರುವುದು ಸಾಬೀತಾಗಿದೆ ಎಂದು ವರದಿ ಸಲ್ಲಿಸಿದೆ. ಸಮಿತಿಯ ವರದಿ ಪ್ರಕಾರ, ಸಹ ಪ್ರಾಧ್ಯಾಪಕರಾದ ವೆಂಕಟಗಿರಿ ದಳವಾಯಿ, ಅಮರೇಶ ಯತಗಲ್‌, ಮೋಹನರಾವ್‌ ಬಿ. ಪಾಂಚಾಳ, ಈ. ಯರ್ರಿಸ್ವಾಮಿ, ಎ.ಎಸ್‌. ಗೋವರ್ಧನ, ಸಹಾಯಕ ತೋಟಗಾರಿಕೆ ಅಧಿಕಾರಿ ಬೀರಪ್ಪ, ಶೀಘ್ರ ಲಿಪಿಗಾರ ರಾಘವೇಂದ್ರ ಅವರ ನೇಮಕ ನಿಯಮಬಾಹಿರ. ಮಿಕ್ಕುಳಿದ ಏಳು ಜನರ ನೇಮಕಾತಿಯಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ.

‘ಹುದ್ದೆಗೆ ನೇಮಕಗೊಂಡ ಎರಡು ವರ್ಷಗಳ ನಂತರ ಪ್ರೊಬೇಷನರಿ ಅವಧಿ ಪೂರ್ಣಗೊಂಡಿದೆ ಎಂದು ಘೋಷಿಸಬೇಕು. ಆದರೆ, ಕುಲಪತಿಯವರು ಎಂಟು ತಿಂಗಳ ವೇತನ ಬಿಟ್ಟು ಕೊಡಬೇಕೆಂದು ಕೇಳುತ್ತಿದ್ದಾರೆ. ಕೊಡಲು ನಿರಾಕರಿಸಿದ್ದರಿಂದ ನಮ್ಮ ಕಡತಗಳನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತಿಲ್ಲ’ ಎಂದು ಏಳು ಜನ ಈ ಹಿಂದೆ ಆರೋಪಿಸಿದ್ದರು.

ನೇಮಕಾತಿ ನಡೆದಾಗ ಮಲ್ಲಿಕಾ ಎಸ್‌. ಘಂಟಿ, ಡಿ. ಪಾಂಡುರಂಗಬಾಬು ಅವರು ಕ್ರಮವಾಗಿ ವಿ.ವಿ. ಕುಲಪತಿ, ಕುಲಸಚಿವರಾಗಿದ್ದರು.

ನಿಯಮಬಾಹಿರ ನೇಮಕ ಸಾಬೀತು
2017–18ನೇ ಸಾಲಿನಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ನಿಯಮಬಾಹಿರವಾಗಿ ನಡೆದಿರುವುದು ಸಾಬೀತಾಗಿದೆ ಎಂದು ನೇಮಕಾತಿ ಪ್ರಕ್ರಿಯೆಗಳನ್ನು ಪರಿಶೀಲಿಸಲು ರಚಿಸಲಾಗಿದ್ದ ಸಮಿತಿಯು ಕುಲಪತಿಯವರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಆ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಬೋಧಕ ಹುದ್ದೆಗಳಿಗೆ ಯುಜಿಸಿ ನಿಗದಿಪಡಿಸಿದ ನಿಯಮಗಳಲ್ಲಿ ಹಾಗೂ ಜಾಹೀರಾತಿನಲ್ಲಿ ಅಧಿಸೂಚಿಸಿದ ನಿಯಮಗಳು ಬಹುತೇಕ ಅಭ್ಯರ್ಥಿಗಳ ನೇಮಕದಲ್ಲಿ ಪಾಲನೆ ಆಗಿಲ್ಲ. ಅನರ್ಹ ಅಭ್ಯರ್ಥಿಗಳನ್ನು ಕೂಡ ಲಿಖಿತ ಪರೀಕ್ಷೆ, ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಲಿಖಿತ ಪರೀಕ್ಷೆ, ಮೌಲ್ಯಮಾಪನ ಮತ್ತು ಮೌಖಿಕ ಸಂದರ್ಶನದ ಸಮಗ್ರ ನೇಮಕಾತಿ ಪ್ರಕ್ರಿಯೆ ಮೂರು ದಿನಗಳಲ್ಲಿ ಪೂರ್ಣಗೊಂಡಿದೆ. ಈ ನೇಮಕಾತಿಯೇ ನಿಯಮಬಾಹಿರ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೇಮಕಾತಿಯಲ್ಲಿನ ಲೋಪ ಕುರಿತು 2021ರ ನವೆಂಬರ್‌ 29ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಬಳಿಕ ನೇಮಕಾತಿ ಪ್ರಕ್ರಿಯೆಗಳ ಪರಿಶೀಲನೆಗೆ ಸಿಂಡಿಕೇಟ್‌ ಸದಸ್ಯ ಪ್ರೊ.ಜಿ.ಸಿ. ರಾಜಣ್ಣ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಮಿತಿ ರಚಿಸಲಾಗಿತ್ತು. ಆ ಸಮಿತಿ ಎಲ್ಲ 14 ಜನರ ದಾಖಲೆಗಳನ್ನು ಪರಿಶೀಲಿಸಿ ಮಾ. 19ರಂದು ಕುಲಪತಿಯವರಿಗೆ ವರದಿ ಸಲ್ಲಿಸಿದೆ.

*
ಅಂದಿನ ಸರ್ಕಾರದ ಆದೇಶದ ಪ್ರಕಾರ ನಿಯಮಾನುಸಾರ ನೇಮಕಾತಿ ಮಾಡಲಾಗಿದೆ. ತಜ್ಞರ ಸಮಿತಿ ಸಲಹೆ ಮೂಲಕ ನೇಮಕಾತಿ ನಡೆದಿದೆ.
–ಡಿ. ಪಾಂಡುರಂಗಬಾಬು, ವಿಶ್ರಾಂತ ಕುಲಸಚಿವ

*
ನೇಮಕಾತಿ ಪ್ರಕ್ರಿಯೆ ಪರಿಶೀಲನೆಗೆ ರಚಿಸಿದ್ದ ಸಮಿತಿ ವರದಿ ಕೊಟ್ಟಿದೆ. ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿ ಮುಂದುವರಿಯಲಾಗುವುದು.
-ಪ್ರೊ.ಎ. ಸುಬ್ಬಣ್ಣ ರೈ, ಕುಲಸಚಿವ, ಹಂಪಿ ಕನ್ನಡ ವಿ.ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.