ಬೆಂಗಳೂರು: ವಿಧಾನಪರಿಷತ್ತಿಗೆ ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್, ಭಾರತಿ ಶೆಟ್ಟಿ, ಶಾಂತಾರಾಮ ಸಿದ್ದಿ ಮತ್ತು ಡಾ.ಸಾಬಣ್ಣ ತಳವಾರ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಬುಧವಾರ ಬೆಳಿಗ್ಗೆ ಭೇಟಿ ಮಾಡಿ ನಾಮನಿರ್ದೇಶನದ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸಿದರು. ಅದರ ಬೆನ್ನಲ್ಲೇ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರು.
ಮಾಜಿ ಶಾಸಕರಾದ ಯೋಗೇಶ್ವರ್ ಮತ್ತುಎಚ್.ವಿಶ್ವನಾಥ್ ಅವರ ಆಯ್ಕೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಬಹಳ ಒತ್ತಡವಿತ್ತು. ಇಬ್ಬರಿಗೂ ಯಡಿಯೂರಪ್ಪ ಮಾತು ಕೊಟ್ಟಿದ್ದರು. ಅದರಂತೆ ಯೋಗೇಶ್ವರ್ ಅವರನ್ನು ಸಿನಿಮಾ ಮತ್ತು ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದಿಂದ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಮತ್ತು ಸಂಘ ಪರಿವಾರದ ಹಿನ್ನೆಲೆಯ ಕೆಲಸಗಾರರನ್ನು ಗುರುತಿಸಿ ಅವರಿಗೆ ಸ್ಥಾನಮಾನ ನೀಡುವ ಪರಿಪಾಠ ಈ ಬಾರಿಯೂ ಮುಂದುವರಿದಿದೆ. ವನವಾಸಿ ಕಲ್ಯಾಣಾಶ್ರಮದ ಪೂರ್ಣಾವಧಿ ಕಾರ್ಯಕರ್ತ ಸಿದ್ದಿ ಸಮುದಾಯದಶಾಂತಾರಾಮ ಸಿದ್ದಿ ಮತ್ತು ಅತ್ಯಂತ ಹಿಂದುಳಿದ ಕೋಲಿ–ಕಬ್ಬಲಿಗ ಸಮುದಾಯಕ್ಕೆ ಸೇರಿದ ಪ್ರೊ. ಸಾಬಣ್ಣ ತಳವಾರ, ಮಹಿಳಾ ಕ್ಷೇತ್ರದಿಂದ ಭಾರತಿ ಶೆಟ್ಟಿಯವರನ್ನು ನಾಮನಿರ್ದೇಶನ ಮಾಡಲಾಗಿದೆ.
ಪರಿಚಯ
ಶಾಂತಾರಾಮ ಸಿದ್ದಿ: ಶಾಂತಾರಾಮ ಸಿದ್ದಿ ಅವರು ಪಶ್ಚಿಮಘಟ್ಟದ ಬುಡಕಟ್ಟುಗಳಲ್ಲಿ ಒಂದಾದ ಸಿದ್ದಿ ಜನಾಂಗಕ್ಕೆ ಸೇರಿದವರು. ಈ ಸಮುದಾಯದಲ್ಲಿ ಪದವಿ ಪಡೆದ ಮೊದಲ ವ್ಯಕ್ತಿ. ಪದವಿ ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ವನವಾಸಿ ಕಲ್ಯಾಣಾಶ್ರಮದ ಪೂರ್ಣಾವಧಿ ಕಾರ್ಯಕರ್ತರಾದರು. 32 ವರ್ಷಗಳಿಂದ ವನವಾಸಿ ಕಲ್ಯಾಣ ಸಂಘಟನೆಯ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸಿ, ಪ್ರಸ್ತುತ ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಲ್ಲಾಪುರದಲ್ಲಿ ’ಜೀವನ ವಿಕಾಸ ಟ್ರಸ್ಟ್’ ನಡೆಸುತ್ತಿದ್ದಾರೆ.
ಪ್ರೊ.ಸಾಬಣ್ಣ ತಳವಾರ: ಕಲಬುರ್ಗಿಯ ಶಹಾಬಾದ್‌ನವರಾದ ಸಾಬಣ್ಣ ‘ಕೋಲಿ ಕಬ್ಬಲಿಗ’ ಸಮಾಜದವರು. ಎಂ.ಎ., ಪಿ.ಎಚ್‌ಡಿ ಮಾಡಿದ್ದಾರೆ. ಕಲಬುರ್ಗಿ ಜಿಲ್ಲೆಯ ಸೇಡಂ, ಚಿತ್ತಾಪುರ ತಾಲ್ಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೆಲಸ ಮಾಡಿದ್ದಾರೆ. 1997ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ನೇಮಕವಾದರು. ಸದ್ಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.