ADVERTISEMENT

ಶಾಲೆಗಳಲ್ಲಿ ನಾಡಗೀತೆ: ‘ತಿದ್ದುಪಡಿ’ ವಿಚಾರವಾಗಿ ವಿಧಾನಸಭೆಯಲ್ಲಿ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 23:30 IST
Last Updated 21 ಫೆಬ್ರುವರಿ 2024, 23:30 IST
ವಿಧಾನಸಭೆ ಕಲಾಪ
ವಿಧಾನಸಭೆ ಕಲಾಪ   

ಬೆಂಗಳೂರು: ‘ಎಲ್ಲ ಶಾಲೆಗಳಲ್ಲಿ ದೈನಂದಿನ ಚಟುವಟಿಕೆ ಆರಂಭವಾಗುವ ಮೊದಲು ನಾಡಗೀತೆ ಹಾಡಬೇಕು’ ಎಂಬ ಸುತ್ತೋಲೆಯಲ್ಲಿದ್ದ ‘ಎಲ್ಲ ಶಾಲೆಗಳಲ್ಲಿ’ ಎನ್ನವುದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ತಿದ್ದುಪಡಿ ಮಾಡಿದ ವಿಚಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಈ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ, ಪರಿಷ್ಕೃತ ಆದೇಶ ಹೊರಡಿಸುವ ಜೊತೆಗೆ, ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತು. ಅಲ್ಲದೆ, ಕೆಲವೇ ನಿಮಿಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಿದ್ದುಪಡಿ ಸುತ್ತೋಲೆಯನ್ನೂ ಹೊರಡಿಸಿತು.

‘ಎಲ್ಲ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆ ಆರಂಭವಾಗುವ ಮೊದಲು ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಆರಂಭದಲ್ಲಿ ಹಾಡುವುದು’ ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಫೆ. 1ರಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯಲ್ಲಿದ್ದ ‌‘ಎಲ್ಲ ಶಾಲೆಗಳು’ ‌ಜಾಗದಲ್ಲಿ ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ’ ಎಂದು ಬದಲಿಸಿ ಇಲಾಖೆಯು ಫೆ. 16ರಂದು ತಿದ್ದುಪಡಿ ‌ಸುತ್ತೋಲೆ ಹೊರಡಿಸಿತ್ತು.

ADVERTISEMENT

ಫೆ. 16ರ ಆದೇಶವನ್ನು ವಿಧಾನಸಭೆಯಲ್ಲಿ ಬುಧವಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಎರಡು ದಿನಗಳ ಹಿಂದಷ್ಟೇ ವಸತಿ ಶಾಲೆಗಳ ಪ್ರವೇಶ ದ್ವಾರದ ಮೇಲೆ ಬರೆಯಲಾಗಿದ್ದ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷ ವಾಕ್ಯವನ್ನು ಬದಲಿಸಲು ಸರ್ಕಾರ ಮುಂದಾಗಿತ್ತು. ಈ ಸರ್ಕಾರಕ್ಕೆ ಏನಾಗಿದೆ? ಈಗ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯ ಅಲ್ಲ ಎನ್ನುವ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ ಹಾಗೂ ಕನ್ನಡಾಂಬೆಗೆ ಅಪಮಾನ ಎಸಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದು ಒಂದು ರೀತಿ ಅಧಿಕಾರಿಗಳ ಹುಚ್ಚಾಟ. ಸರ್ಕಾರಕ್ಕೂ ಅಧಿಕಾರಿಗಳಿಗೂ ಸಂಬಂಧ ಇಲ್ಲದಂತಾಗಿದೆ. ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತೊಮ್ಮೆ ತನ್ನ ಕನ್ನಡ ವಿರೋಧಿ ಧೋರಣೆ ತೋರಿದೆ’ ಎಂದೂ ಟೀಕಿಸಿದರು. ಎಸ್‌. ಸುರೇಶ್‌ಕುಮಾರ್‌ ಸೇರಿದಂತೆ ಬಿಜೆಪಿಯ ಎಲ್ಲ ಸದಸ್ಯರೂ ಅವರಿಗೆ ದನಿಗೂಡಿಸಿದರು.

ಆಗ ಸ್ಪಷ್ಟನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ‘ತಿದ್ದುಪಡಿ ಮಾಡುವ ವೇಳೆ ಆಗಿರುವ ಪ್ರಮಾದದಿಂದ ಈ ರೀತಿ ಆಗಿದೆ’ ಎಂದು ಹೇಳಿದರು. ‘ಈ ತಪ್ಪಿಗೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್‌.‌ಕೆ. ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.