ಬೆಂಗಳೂರು: ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡುವುದರ ಜತೆಗೆ, ಅದಕ್ಕೆ ಪೂರಕ ವ್ಯವಸ್ಥೆ ಮತ್ತು ರಕ್ಷಣೆ ನೀಡುವ ಸಂಬಂಧ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲಾಗಿದೆ.
ಈ ತಿದ್ದುಪಡಿಗೆ ಸೋಮವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಇದಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಯಾವುದೇ ಮಹಿಳೆ ಅಂಗಡಿ ಅಥವಾ ವಾಣಿಜ್ಯ ಮಳಿಗೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಬಯಸಿದರೆ ಅದಕ್ಕೆ ಅವಕಾಶ ನೀಡಬೇಕು. ಅದಕ್ಕಾಗಿ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಪ್ರಮುಖ ಷರತ್ತುಗಳು
*ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಮಹಿಳೆಯರಿಂದ ಲಿಖಿತ ಮನವಿ ಪಡೆಯಬೇಕು.
*ಕೆಲಸದ ಸ್ಥಳ ಹಾಗೂ ಮನೆ ನಡುವೆ ಉಚಿತವಾಗಿ ವಾಹನ ವ್ಯವಸ್ಥೆ ಮಾಡಬೇಕು.
*ಈ ವಾಹನಕ್ಕೆ ರಕ್ಷಣಾ ವ್ಯವಸ್ಥೆಯ ಜತೆಗೆ, ಜಿಪಿಎಸ್ ಅಳವಡಿಸಿ ಸಂಚಾರದ ಮೇಲೆ ನಿಗಾ ಇಡಬೇಕು. ರಾತ್ರಿ ಪಾಳಿಯ ಸಂದರ್ಭದಲ್ಲಿ ಹೆಚ್ಚು ರಕ್ಷಣಾ ಸಿಬ್ಬಂದಿ ನೇಮಿಸಬೇಕು.
*ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ರೆಸ್ಟ್‌ರೂಂ, ಶೌಚಾಲಯ, ಡಿಸ್ಪೆನ್ಸರಿ, ಲಾಕರ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿರಬೇಕು.
*ಚಾಲಕರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರ ಜತೆಗೆ, ಅವರ ಹಿಂದಿನ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಮಾಹಿತಿಯನ್ನೂ ಪಡೆದುಕೊಳ್ಳಬೇಕು. ಮಹಿಳಾ ಉದ್ಯೋಗಿಗಳನ್ನು ಕರೆದುಕೊಂಡು ಬರುವ ಮತ್ತು ಬಿಟ್ಟು ಬರುವ ಮಾರ್ಗವನ್ನು ಮೇಲ್ವಿಚಾರಕರೇ ನಿರ್ಧರಿಸಬೇಕು.
*ಮಹಿಳಾ ಉದ್ಯೋಗಿಗಳ ದೂರವಾಣಿ ಸಂಖ್ಯೆ, ಇ–ಮೇಲ್ ಐಡಿ, ವಿಳಾಸವನ್ನು ಅನಧಿಕೃತ ವ್ಯಕ್ತಿಗಳ ಜತೆ ಹಂಚಿಕೊಳ್ಳಬಾರದು.
ಮಾರ್ಚ್ 5ರಂದು ಬಜೆಟ್
ವಿಧಾನಮಂಡಲದ ಅಧಿವೇಶನವು ಜನವರಿ ಬದಲಿಗೆ ಫೆಬ್ರುವರಿ 17ರಿಂದ 21ರವರೆಗೆ ನಡೆಯಲಿದೆ.
ಫೆ.17ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಅಲ್ಲದೆ, ಮಾರ್ಚ್ 2ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮಾ. 5ರಂದು ಬಜೆಟ್ ಮಂಡನೆಯಾಗಲಿದೆ. ಈ ಅಧಿವೇಶನ ಹೆಚ್ಚು ದಿನಗಳ ಕಾಲ ನಡೆಸುವ ಚಿಂತನೆ ಇದೆ ಎಂದರು.
ಕೈಗಾರಿಕಾ ವ್ಯಾಜ್ಯ ಕಾಯ್ದೆಗೆ ತಿದ್ದುಪಡಿ
ಕೈಗಾರಿಕೆಗಳು ಪ್ರತಿ ಆರು ತಿಂಗಳಿಗೊಮ್ಮೆ ನವೀಕರಿಸಬೇಕಿದ್ದ ಪಬ್ಲಿಕ್ ಯುಟಿಲಿಟಿ ಅನುಮತಿಯನ್ನು ಇನ್ನು ಮುಂದೆ ಮೂರು ವರ್ಷಗಳಿಗೊಮ್ಮೆ ನವೀಕರಿಸುವ ಅವಧಿ ವಿಸ್ತರಣೆಗಾಗಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಇದಕ್ಕೆ ಕೇಂದ್ರ ಸರ್ಕಾರ ಅನುಮತಿಯ ಅಗತ್ಯವಿದೆ. ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದ ಬಳಿಕ ಅದನ್ನು ಕೇಂದ್ರಕ್ಕೆ ಕಳಿಸಲಾಗುವುದು ಎಂದರು.
ಟರ್ಫ್ ಕ್ಲಬ್ ಬಾಡಿಗೆ ವಸೂಲಿಗೆ ಕ್ರಮ
ಬೆಂಗಳೂರು ಟರ್ಫ್ ಕ್ಲಬ್‌ನಿಂದ ಸರ್ಕಾರಕ್ಕೆ ₹37.46 ಕೋಟಿ ಬಾಡಿಗೆ ಬಾಕಿ ಉಳಿದಿದ್ದು, ಅದರ ವಸೂಲಿಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ರೇಸ್‌ಕೋರ್ಸ್ ಸ್ಥಳಾಂತರದ ನಿರ್ಧಾರ ತೆಗೆದುಕೊಂಡ ಬಳಿಕ ಟರ್ಫ್ ಕ್ಲಬ್ ನ್ಯಾಯಾಲಯದಿಂದ ಯಥಾಸ್ಥಿತಿ ಆದೇಶವನ್ನು ಪಡೆದುಕೊಂಡು ಬಂದಿದೆ. ಆ ಬಳಿಕ ಬಾಡಿಗೆ ಪಾವತಿಸಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.
ಮೈಸೂರು ಟರ್ಫ್ ಕ್ಲಬ್‌ನ ಬಾಡಿಗೆಯನ್ನು ಶೇ 2ರಿಂದ ಶೇ 7ಕ್ಕೆ ಹೆಚ್ಚಿಸಲಾಗಿದೆ. ಒಟ್ಟು ಆದಾಯದಲ್ಲಿ ಶೇ 7 ಬಾಡಿಗೆ ನೀಡಬೇಕಾಗುತ್ತದೆ ಎಂದು ಹೇಳಿದರು.
ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು
* ‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ’ಗೆ ಅಧ್ಯಕ್ಷರಾಗುವವರು ವಿಧಾನಸಭೆ ಅಥವಾ ವಿಧಾನಪರಿಷತ್ ಸದಸ್ಯರು ಆಗಿರಬೇಕು ಎಂದು ಕಾಯ್ದೆಗೆ ತಿದ್ದುಪಡಿ. ಈ ಹಿಂದೆ ಸಚಿವರಿಗೆ ಮಾತ್ರ ಅವಕಾಶ ಇತ್ತು. ಈಗ ಶಾಸಕರಿಗೆ ಅವಕಾಶ ಸಿಗಲಿದೆ. ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುವುದು.
* ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕದಲ್ಲಿ 10 ವರ್ಷ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಶೇ 25ರಷ್ಟು ಮೀಸಲಾತಿ ನೀಡಲು ಕಾಯ್ದೆಗೆ ತಿದುಪಡಿ.
* ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒಪ್ಪಿಗೆ.
* ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಮಡಿಕೇರಿಯಲ್ಲಿ ತಲಾ ₹2.50 ಕೋಟಿ ವೆಚ್ಚದಲ್ಲಿ ಕ್ರೀಡಾಪಟುಗಳಿಗೆ ಹಾಸ್ಟೆಲ್ ನಿರ್ಮಾಣ.
* ಏಳು ಜಿಲ್ಲೆಗಳಲ್ಲಿ ಜಿಟಿಟಿಸಿಯನ್ನು ಮೇಲ್ದರ್ಜೆಗೇರಿಸಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವ. ಖಾಸಗಿಯವರು ಶೇ 90, ಸರ್ಕಾರ ಶೇ 10ರಷ್ಟು ಹಣ ತೊಡಗಿಸಲಿವೆ. ಇದಕ್ಕಾಗಿ ಸರ್ಕಾರ ₹36 ಕೋಟಿ ಅನುದಾನ ನೀಡಲಿದೆ.
* ಬೆಂಗಳೂರಿನ ವಿಕ್ಟೋರಿಯಾ, ಮಂಗಳೂರಿನ ವೆನ್‌ಲಾಕ್, ಹುಬ್ಬಳ್ಳಿ ಕಿಮ್ಸ್ ಮತ್ತು ಬಳ್ಳಾರಿ ವಿಮ್ಸ್ ಆಸ್ಪತ್ರೆಗಳಲ್ಲಿ ರಕ್ತ ನಿಧಿ ಕೇಂದ್ರಗಳನ್ನು ಪ್ರಾದೇಶಿಕ ಶ್ರೇಷ್ಠತಾ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
* ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯಲ್ಲಿರುವ ಸರ್ ಎಂ.ವಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಕಟ್ಟಡ ಸ್ಥಾಪನೆಗೆ ₹14.9 ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.