ಚಿಕ್ಕಮಗಳೂರು: ‘ದಸರಾದಲ್ಲಿ ಭಾಗವಹಿಸಲು ಮೈಸೂರಿಗೆ ಹೋಗಿದ್ದ ವೇಳೆ ಸಹಜವಾಗಿ ಸಚಿವರುಗಳು ಒಟ್ಟಾಗಿ ಊಟ ಮಾಡಿದ್ದೇವೆ. ಅದರಲ್ಲಿ ವಿಶೇಷ ಏನು ಇಲ್ಲ, ಯಾವುದೇ ರಾಜಕೀಯ ಚರ್ಚೆಗಳೂ ನಡೆದಿಲ್ಲ' ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಯಾವ ಸಭೆಯೂ ಇಲ್ಲ. ಸಚಿವ ಎಚ್.ಸಿ.ಮಹದೇವಪ್ಪ ಮನೆ ಮತ್ತು ನಮ್ಮ ಮನೆ ಅಕ್ಕಪಕ್ಕದಲ್ಲೇ ಇವೆ. ಆಗಾಗ ಭೇಟಿಯಾಗುತ್ತೇವೆ. ಸಾಮಾನ್ಯವಾಗಿ ಶಾಸಕರುಗಳೂ ಇದ್ದೇ ಇರುತ್ತಾರೆ. ಇದರಲ್ಲಿ ವಿಶೇಷ ಏನೂ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ’ ಎಂದು ಹೇಳಿದರು.
‘ಸರ್ಕಾರ ಬೀಳಲಿದೆ ಎಂದು ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಅದಕ್ಕೆ ಮಹತ್ವ ಕೊಡುವ ಅಗತ್ಯವಿಲ್ಲ. ಜಾತಿಗಣತಿ ವಿಷಯ ಸಚಿವ ಸಂಪುಟಕ್ಕೆ ಬರಲಿದ್ದು, ಅಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದರು.
ತರೀಕೆರೆಯಲ್ಲಿ ನಡೆದ ವಿವಿಧ ಕಾಮಗಾರಿಗಳ ಸಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಭಾಗವಹಿಸಿದ್ದರು. ಅದೇ ವೇದಿಕೆಯಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಸಿದ್ದರಾಮಯ್ಯ ಅವರ ನಂತರ ಅವರಂತಹ ನಾಯಕ ಯಾರಾದರೂ ಇದ್ದರೆ ಅದು ಸತೀಶ್ ಜಾರಕಿಹೊಳಿ’ ಎಂದು ಹೊಗಳಿದರು.
‘ಕೆಳಗಿಳಿಸಲು ಕಾಂಗ್ರೆಸ್‌ನವರಿಗೇ ಆತುರ’
ದಾವಣಗೆರೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಬಿಜೆಪಿಗಿಂತ ಕಾಂಗ್ರೆಸ್‌ನವರಿಗೇ ಹೆಚ್ಚು ಆತುರವಿದೆ. ಹೀಗಾಗಿ ಟೀ ಪಾರ್ಟಿ, ಡಿನ್ನರ್ ಪಾರ್ಟಿಗಳು ನಡೆಯುತ್ತಿವೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಈಚೆಗೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಪಟ್ಟಿರುವ ಯುವಕರನ್ನು ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಭೇಟಿ ಮಾಡಿ, ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
‘ಸಿದ್ದರಾಮಯ್ಯ ಮೇಲೆ ಅವರ ಪಕ್ಷದವರಿಗೇ ವಿಶ್ವಾಸವಿಲ್ಲ. ಮುಡಾ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವಿಚಾರ ಮುನ್ನೆಲೆಗೆ ತಂದಿದ್ದಾರೆ. ಕಾಂತರಾಜು ಆಯೋಗ 2017ರಲ್ಲಿ ವರದಿ ಸಲ್ಲಿಸಿತ್ತು. ಅದನ್ನು ಇಷ್ಟು ದಿನ ಎಲ್ಲಿ ಇಟ್ಟಿದ್ದರು. ಸಿದ್ದರಾಮಯ್ಯನವರು ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ, ಸಮೀಕ್ಷೆ ಎನ್ನುತ್ತಿದ್ದಾರೆ. ಜಾತಿಗಣತಿ ವರದಿ ಬಿಡುಗಡೆಗೆ ನಮ್ಮ ವಿರೋಧ ಇಲ್ಲ. ಆದರೆ, ರಾಜಕಾರಣಕ್ಕಾಗಿ, ಸಮಾಜ ಒಡೆಯಲು ಇದನ್ನು ದುರ್ಬಳಕೆ ಮಾಡಿಕೊಂಡರೆ ಸಹಿಸುವುದಿಲ್ಲ’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ಬಿಜೆಪಿ ಶಾಸಕ ಮುನಿರತ್ನ ಪ್ರಕರಣದಲ್ಲಿ ತೋರಿದ ಆತುರವನ್ನು ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ ವಿಚಾರದಲ್ಲಿ ತೋರಲಿಲ್ಲ. ಈಗ ಅವರದೇ ಪಕ್ಷದ ಶಾಸಕರ (ವಿನಯ ಕುಲಕರ್ಣಿ) ಮೇಲೆ ಪ್ರಕರಣ ದಾಖಲಾಗಿದೆ. ಏನು ಮಾಡುತ್ತಾರೋ ನೋಡೋಣ’ ಎಂದರು.
ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಡಿಕೆಶಿ ಮೊದಲಿಗರು: ಬಿವೈವಿ
ಹುಬ್ಬಳ್ಳಿ: ‘ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವವರೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿ ಪೂರ್ಣಗೊಳಿಸುವರು ಎಂದು ಹೇಳುವವರೇ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ಡಿ.ಕೆ.ಶಿವಕುಮಾರ್ ಮೊದಲಿಗರು’ ಎಂದರು.
‘ಸಿದ್ದರಾಮಯ್ಯ ಅವರು ಸೂಚಿಸುವ ವ್ಯಕ್ತಿಗಳೇ ಸಹಜವಾಗಿ ಮುಖ್ಯಮಂತ್ರಿಯಾಗುತ್ತಾರೆ. ಹೀಗಾಗಿ ಅವರನ್ನು ಓಲೈಸಿಕೊಳ್ಳಲು ಪದೇ ಪದೇ ಅನಿವಾರ್ಯವಾಗಿ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ದಸರಾ ನಂತರ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ’ ಎಂದು ಹೇಳಿದರು.
ಪ್ರಾಮಾಣಿಕ ಕಳಕಳಿ ಇಲ್ಲ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ಹಗರಣಗಳ ಸರಮಾಲೆಯಲ್ಲಿ ಸಿಲುಕಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಅಲುಗಾಡುತ್ತಿದ್ದಂತೆಯೇ ಜಾತಿ ಜನಗಣತಿ ವರದಿ ಅನುಷ್ಠಾನ ಎಂಬ ದಾಳವನ್ನು ಉರುಳಿಬಿಟ್ಟಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಜಾತಿ ಗಣತಿ ಎಂಬುದೇ ಅವೈಜ್ಞಾನಿಕ ಎಂದು ಈ ಹಿಂದೆ ಅವರ ಪಕ್ಷದ ಹಿರಿಯ ಮುಖಂಡ, ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದ್ದರು. ಈ ವರದಿ ಅನುಷ್ಠಾನದಲ್ಲಿ ಸಿದ್ದರಾಮಯ್ಯ ಅವರಿಗೆ ಯಾವುದೇ ಪ್ರಾಮಾಣಿಕ ಕಳಕಳಿ ಇಲ್ಲ. ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ನಾಟಕ’ ಎಂದು ಟೀಕಿಸಿದರು.
ಈಶ್ವರಪ್ಪನದು 20–20 ಕ್ರಿಕೆಟ್ ಮ್ಯಾಚ್: ಕೆ.ಎಸ್.ಈಶ್ವರಪ್ಪ ಆರ್‌ಸಿಬಿ (ರಾಯಣ್ಣ, ಚನ್ನಮ್ಮ ಬ್ರಿಗೇಡ್) ಸ್ಥಾಪನೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆರ್‌ಸಿಬಿ ಬಗ್ಗೆ ನಾನು ಏನನ್ನೂ ಹೇಳಲು ಇಷ್ಟಪಡಲ್ಲ. ಅದೊಂದು 20–20 ಕ್ರಿಕೆಟ್ ಮ್ಯಾಚ್ ಇದ್ದ ಹಾಗೆ. ನಾನು ಟೆಸ್ಟ್ ಮ್ಯಾಚ್ ಆಡಲು ಬಂದಿದ್ದೇನೆ. ಪಕ್ಷದಿಂದ ಉಚ್ಚಾಟನೆಯಾದವರು, ಹೊರಹೋದವರು ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಹಾಗೂ ಯೋಗ್ಯತೆಯನ್ನು ಉಳಿಸಿಕೊಂಡಿಲ್ಲ’ ಎಂದರು.
‘ಪಕ್ಷದ ಹೈಕಮಾಂಡ್‌ಗೆ ಮಂಕುಬೂದಿ ಎರಚಿ ಪಕ್ಷದ ರಾಜ್ಯಾಧ್ಯಕ್ಷನಾಗಿಲ್ಲ. ನಾನು ನಾಯಕ
ನಾಗಿ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ’ ಎಂದು ವಿಜಯೇಂದ್ರ ಹೇಳಿದರು.
ವಿಜಯೇಂದ್ರ ಯಾರು?: ಮಹದೇವಪ್ಪ
ಮೈಸೂರು: ‘ಮುಖ್ಯಮಂತ್ರಿ ಬದಲಾಗುತ್ತಾರೆ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದೆಲ್ಲಾ ಹೇಳುವುದಕ್ಕೆ ಬಿ.ವೈ. ವಿಜಯೇಂದ್ರ ಯಾರು? ಅವರಿಗೆ ಕಾಂಗ್ರೆಸ್ ಪಕ್ಷವನ್ನು ಬರೆದುಕೊಟ್ಟಿರುವವರು ಯಾರು?’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕೇಳಿದರು.
ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ನಿಮಗೆ (ಮಾಧ್ಯಮವರಿಗೆ) ಹೇಳಿದ್ದ್ಯಾರು? ಬಿಜೆಪಿಯವರಿಗೂ, ಜೆಡಿಎಸ್‌ನವರಿಗೂ– ರಾಜ್ಯ ಸರ್ಕಾರಕ್ಕೂ ಏನು ಸಂಬಂಧ? ಬಿಜೆಪಿಯರಿಗೆ ಮಾಡಲು ಕೆಲಸವಿಲ್ಲ’ ಎಂದು ದೂರಿದರು.
‘ಬಿಜೆಪಿಯವರು ದಿನ ಬೆಳಗಾದರೆ ಏನೇನೋ ಹೇಳುತ್ತಾರೆ. ಅದಕ್ಕೆಲ್ಲ ನೀವ್ಯಾಕೆ ಮಹತ್ವ ಕೊಡುತ್ತೀರಿ? ನಿಮಗೆ ಏನು ಬೇಕು, ನಿಮ್ಮ ಉದ್ದೇಶವೇನು’ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. 2028ರಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಆಸೆ ನನಗೂ ಇದೆ. ಆಗ ಸಾಧ್ಯವಾದರೆ ನೋಡೋಣ–ಸತೀಶ ಜಾರಕಿಹೊಳಿ, ಸಚಿವ
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಬಿಜೆಪಿಗಿಂತ ಕಾಂಗ್ರೆಸ್‌ನವರಿಗೇ ಹೆಚ್ಚು ಆತುರವಿದೆ. ಹೀಗಾಗಿ ಟೀ ಪಾರ್ಟಿ, ಡಿನ್ನರ್ ಪಾರ್ಟಿಗಳು ನಡೆಯುತ್ತಿವೆ–ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.