ಬೆಂಗಳೂರು: ರಾಜ್ಯದಲ್ಲಿ ತೆರಿಗೆಯೇತರ ವರಮಾನ ಸಂಗ್ರಹ ಹೆಚ್ಚಳದ ಅವಕಾಶಗಳನ್ನು ಪರಿಶೀಲಿಸಲು ಹಾಗೂ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಲು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.
ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕ ಮಂಡಳಿಯ (ಸಿಬಿಐಸಿ) ಮಾಜಿ ಅಧ್ಯಕ್ಷ ನಜೀಬ್ ಶಾ, ನಿವೃತ್ತ ಐಎಎಸ್ ಅಧಿಕಾರಿ ಎಚ್. ಶಶಿಧರ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆಯ ಪ್ರಾಧ್ಯಾಪಕ ಕೃಷ್ಣರಾಜ್ ಮತ್ತು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇತರ ಸದಸ್ಯರಾಗಿದ್ದಾರೆ.
ಈ ಕುರಿತು ಆಗಸ್ಟ್ 25ರಂದು ಆದೇಶ ಹೊರಡಿಸಿರುವ ಸರ್ಕಾರ, ವಿವಿಧ ವಲಯಗಳಲ್ಲಿ ಆಸ್ತಿ ನಗದೀಕರಣದ ಅವಕಾಶಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ಜಾರಿಗೊಳಿಸಲು ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಅಗತ್ಯವಾದ ಶಿಫಾರಸು ಒಳಗೊಂಡ ಸಮಗ್ರ ವರದಿ ನೀಡಲು ಸಮಿತಿಗೆ ಸೂಚಿಸಿದೆ.
ವರದಿ ಸಲ್ಲಿಸಲು ಒಂದು ವರ್ಷ ಅವಧಿ ನಿಗದಿಪಡಿಸಲಾಗಿದೆ. ಎಲ್ಲಾ ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ–ಮಂಡಳಿಗಳು ಸಮಿತಿಗೆ ಅಗತ್ಯವಾದ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.
ಐದು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದಿಂದ ಎದುರಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಿಂತನೆ ನಡೆಸಿತ್ತು. ರಾಜ್ಯದಲ್ಲಿ ವರಮಾನ ಸಂಗ್ರಹ ಹೆಚ್ಚಳಕ್ಕೆ ಇರುವ ಅವಕಾಶಗಳ ಕುರಿತು ಹಣಕಾಸು ಇಲಾಖೆಗೆ ಸಲಹೆ ನೀಡಲು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಕಂಪನಿಯನ್ನು ನೇಮಿಸಿಕೊಳ್ಳಲಾಗಿತ್ತು. ಈ ಕಂಪನಿ ಇತ್ತೀಚೆಗೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 25,000 ಎಕರೆ ಜಮೀನುಗಳ ನಗದೀಕರಣ ಅಥವಾ ರಾಜ್ಯ ನಿರ್ದೇಶಿತ ನಗರೀಕರಣ ಮಾದರಿಗಳ ಮೂಲಕ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ₹36,000 ಕೋಟಿ ವೆಚ್ಚ ಮಾಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ₹52,009 ಕೋಟಿ ನಿಗದಿ ಮಾಡಿದೆ.
‘ಗ್ಯಾರಂಟಿ’ಗಳ ಹೊರೆಯು ರಾಜ್ಯ ಸರ್ಕಾರವನ್ನು ರಾಜಸ್ವ ಕೊರತೆಯತ್ತ ತಳ್ಳುತ್ತಿದೆ. ಇದರಿಂದಾಗಿ ಹೆಚ್ಚುವರಿ ಸಂಪನ್ಮೂಲಗಳ ಸಂಗ್ರಹ ಮಾಡಲೇಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಖಾಸಗಿ ಪಾಲುದಾರಿಕೆಯೊಂದಿಗೆ ಆಸ್ತಿ ನಗದೀಕರಣಕ್ಕೆ ಮುಂದಾಗಿದ್ದ ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.