ಬೆಂಗಳೂರು: ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಹೋರಾಟ, ಬಣಗಳ ನಡುವಿನ ತಿಕ್ಕಾಟದಿಂದಾಗಿ ಹಳಿ ತಪ್ಪಿದೆ.
ಅತಿಥಿ ಉಪನ್ಯಾಸಕರಲ್ಲೇ ಐದು ಬಣಗಳು ಸೃಷ್ಟಿಯಾಗಿದ್ದು, ಕೆಲ ಬಣಗಳು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ– ಪ್ರತ್ಯಾರೋಪಗಳಲ್ಲಿ ತೊಡಗಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ, ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ, ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘಗಳು ಅಸ್ತಿತ್ವದಲ್ಲಿವೆ. ಸಕ್ರಿಯವಾಗಿರುವ ಬಣಗಳ ನಡುವಿನ ಸಂಘರ್ಷದಿಂದ ಬಹುತೇಕ ಅತಿಥಿ ಉಪನ್ಯಾಸಕರು ತಟಸ್ಥರಾಗಿ ಉಳಿದಿದ್ದಾರೆ.
ಕನಿಷ್ಠ ಮೂರು ವರ್ಷಗಳು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕು. ಅಲ್ಲಿಯವರೆಗೂ 2018 ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ಹೊರಡಿಸಿದ್ದ ಆದೇಶದಂತೆ ಪ್ರತಿ ಗಂಟೆಗೆ ₹1,500 ವೇತನದಂತೆ ಮಾಸಿಕ ₹50 ಸಾವಿರ ವೇತನ ನಿಗದಿ ಮಾಡಬೇಕು. ಪ್ರತಿ ವರ್ಷ ಕೌನ್ಸೆಲಿಂಗ್ ನಡೆಸುವ ಬದಲು ಸೇವಾಜ್ಯೇಷ್ಠತೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಆರೋಗ್ಯ ವಿಮೆ ಜಾರಿ ಮಾಡಬೇಕು ಎಂಬುದು ಅತಿಥಿ ಉಪನ್ಯಾಸಕರ ಪ್ರಮುಖ ಬೇಡಿಕೆಗಳಾಗಿವೆ.
ಬೇಡಿಕೆ ಈಡೇರಿಕೆಗಾಗಿ ರಾಜ್ಯದಾದ್ಯಂತ ನವೆಂಬರ್‌ನಿಂದಲೇ ತರಗತಿಗಳನ್ನು ಬಹಿಷ್ಕರಿಸಿ ಹೋರಾಟಕ್ಕೆ ಇಳಿದಿದ್ದರು. ಈಗ ಬಣ ರಾಜಕೀಯದಿಂದಾಗಿ ಬಹುತೇಕರು ತಟಸ್ಥರಾಗಿ ಉಳಿದಿದ್ದಾರೆ. ಕೆಲವರು ತರಗತಿಗಳಿಗೆ ಮರಳುತ್ತಿದ್ದಾರೆ. ಕೆಲವು ಕಾಲೇಜುಗಳಲ್ಲಿ ಒಂದು ತಿಂಗಳನಿಂದ ಪಾಠಗಳು ನಡೆದಿಲ್ಲ. ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿದ್ದಾರೆ.
‘ಪಾಠಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡ ವರ್ಗ, ಇತರೆ ವೃತ್ತಿ ಮಾಡುತ್ತಾ ಜತೆಗೆ ಬೋಧನೆಯನ್ನೂ ಮಾಡುತ್ತಿರುವ ವರ್ಗ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಾ ಪ್ರತಿಷ್ಠೆಗಷ್ಟೇ ಕಾಲೇಜಿಗೆ ಬರುವ ವರ್ಗ ಸೇರಿ ಮೂರು ವರ್ಗದ ಉಪನ್ಯಾಸಕರಿದ್ದಾರೆ. ಮೊದಲ ವರ್ಗದವರಷ್ಟೇ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಅಂಥವರಿಂದ ಹೋರಾಟ ಗಟ್ಟಿಗೊಳ್ಳುತ್ತದೆಯೇ’ ಎಂದು ಒಂದು ಸಂಘದ ಅಧ್ಯಕ್ಷರೊಬ್ಬರು ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿದ್ದಾರೆ.
‘ಇಂತಹ ಸಂದೇಶಗಳು ನಮ್ಮನ್ನು ಘಾಸಿಗೊಳಿಸಿದೆ. ಇತರೆ ಕೆಲಸ ಮಾಡದಿದ್ದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಹೀಗೆ ತೇಜೋವಧೆ ಮಾಡುವವರ ಜತೆ ನಾವು ಏಕೆ ಹೋರಾಟ ಮಾಡಬೇಕು’ ಎನ್ನುತ್ತಾರೆ ಅತಿಥಿ ಉಪನ್ಯಾಸಕ ರವಿಕುಮಾರ್.
ಮೂರು ವರ್ಗದ ಉಪನ್ಯಾಸಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಮೊತ್ತೊಂದು ಬಣ, ‘ಹಿಂದಿನ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡ ಸಂಘಟನೆಯೊಂದು ಕೆಲಸದ ಅವಧಿ ಹೆಚ್ಚಳದ ಭರವಸೆ ಒಪ್ಪಿಕೊಂಡು ಐದು ಸಾವಿರ ಅತಿಥಿ ಉಪನ್ಯಾಸಕರ ಅನ್ನ ಕಿತ್ತುಕೊಂಡಿತು. ಇಬ್ಬರ ಅನ್ನ ಒಬ್ಬರೇ ತಿನ್ನುವುದನ್ನು ಸಮರ್ಥಿಸಿಕೊಳ್ಳುವುದು ಸರಿಯೇ’ ಎಂದು ರಘುಪತಿ ಎನ್ನುವವರು ಪ್ರಶ್ನಿಸಿದ್ದಾರೆ.
‘ಕೆಲಸ ಕಾಯಂ ಮಾಡಲು ಪ್ರತಿಯೊಬ್ಬರೂ ಹಣ ನೀಡಬೇಕು. ತಂದೆ– ತಾಯಿ ಪ್ರೀತಿ ಬಿಟ್ಟರೆ ಪ್ರಪಂಚದಲ್ಲಿ ಯಾವುದೂ ಉಚಿತವಾಗಿ ಸಿಗದು. ಸರ್ಕಾರದಲ್ಲಿ ತಳಮಟ್ಟದಿಂದಲೂ ಹಣ ಖರ್ಚು ಮಾಡಬೇಕು. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಸಹಕರಿಸಬೇಕು’ ಎಂದು ಅತಿಥಿ ಉಪನ್ಯಾಸಕರ ಸಂಘವೊಂದರ ಅಧ್ಯಕ್ಷ, ಉಪನ್ಯಾಸಕರ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಿದ್ದೇವೆ. ಎರಡು ದಶಕಗಳ ಈ ಸಮಸ್ಯೆ ಬಗೆಹರಿಸಲು ಸ್ವಲ್ಪ ಸಮಯ ಬೇಕಿದೆ. ಕಾನೂನು ವ್ಯಾಪ್ತಿಯಲ್ಲಿನ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಿ, ಅನುಕೂಲ ಮಾಡಿಕೊಡಲಾಗುವುದು. ಆದರೆ, ಕೆಲ ಸಂಘಟನೆಗಳು ಮಾತುಕತೆಗೂ ಬಾರದೇ, ಸಮಯವನ್ನೂ ನೀಡದೆ ತರಗತಿ ಬಹಿಷ್ಕರಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರ್ಕಾರ ಪರ್ಯಾಯ ಯೋಚನೆ ಮಾಡಲಿದೆ‘ ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.