ಬೆಂಗಳೂರು: ‘ಉಪ ವಿಭಾಗಾಧಿಕಾರಿ (ಎ.ಸಿ) ಅರೆ ನ್ಯಾಯಿಕ ನ್ಯಾಯಾಲಯದಲ್ಲಿ ಈ ಹಿಂದಿನ ಸರ್ಕಾರ ಉಳಿಸಿ ಹೋಗಿದ್ದ ಹಳೆಯ ತಕರಾರು ಅರ್ಜಿಗಳ ಪೈಕಿ, ಶೇ 80ರಷ್ಟು ಪ್ರಕರಣಗಳನ್ನು ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ಶನಿವಾರ ವಿಡಿಯೊ ಸಂವಾದದ ಮೂಲಕ ಮಾಸಿಕ ಸಭೆ ನಡೆಸಿದ ಅವರು, ‘ಎ.ಸಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಲೇವಾರಿಗೆ ಸರ್ಕಾರ ನಿಗದಿಪಡಿಸಿರುವ ಕಾಲಮಿತಿ ಆರು ತಿಂಗಳು ಮಾತ್ರ. ಆದರೆ, ಹಿಂದಿನ ಸರ್ಕಾರ ಕಂದಾಯ ನ್ಯಾಯಾಲಯಗಳ ಪ್ರಕರಣಗಳ ವಿಳಂಬದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ’ ಎಂದರು.
1,774 ಪ್ರಕರಣಗಳು ಬಾಕಿ: ‘ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಎ.ಸಿ ನ್ಯಾಯಾಲಯದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ 59,339 ಪ್ರಕರಣಗಳು ವಿಲೇ ಆಗದೆ ಬಾಕಿ ಇದ್ದವು. ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಬಾಕಿ ಪ್ರಕರಣಗಳ ವಿಲೇವಾರಿಗೆ ಕಳೆದ ಒಂದು ವರ್ಷ ಅಭಿಯಾನ ಮಾದರಿಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.
‘ಎ.ಸಿ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿ ಇದ್ದ ಪ್ರಕರಣಗಳ ಪೈಕಿ 36,956 ಪ್ರಕರಣಗಳನ್ನು ಒಂದು ವರ್ಷದಲ್ಲಿ ವಿಲೇ ಮಾಡಲಾಗಿದೆ’ ಎಂದರು.
‘1 ವರ್ಷದಿಂದ 5 ವರ್ಷಗಳ ಅವಧಿಯಲ್ಲಿ ಬಾಕಿ ಇದ್ದ 26,552 ಪ್ರಕರಣಗಳ ಪೈಕಿ 10,992 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಹಿಂದಿನ ಸರ್ಕಾರ ಐದು ವರ್ಷಕ್ಕೂ ಹೆಚ್ಚು ಅವಧಿಯ 32,787 ಪ್ರಕರಣಗಳನ್ನು ಬಾಕಿ ಉಳಿಸಿತ್ತು. ಈ ಪ್ರಕರಣಗಳಲ್ಲಿ 25,964 ಪ್ರಕರಣಗಳಿಗೆ ವರ್ಷದಲ್ಲಿ ಮುಕ್ತಿ ನೀಡಲಾಗಿದೆ. 6,823 ಪ್ರಕರಣಗಳು ಉಳಿದಿವೆ’ ಎಂದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಆಯುಕ್ತ ಸುನೀಲ್ ಕುಮಾರ್ ಇದ್ದರು.
‘18 ವಿಶೇಷ ಎ.ಸಿಗಳ ನೇಮಕ’
‘ಎ.ಸಿ ಕಂದಾಯ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಇತ್ಯರ್ಥಕ್ಕೆ 18 ಜನ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಿಸಲಾಗಿದೆ. ತಕರಾರು ಅರ್ಜಿಗಳ ವಿಲೇವಾರಿಯನ್ನು ಎಲ್ಲ ಅಧಿಕಾರಿಗಳು ಇದೇ ವೇಗದಲ್ಲಿ ಮುಂದುವರೆಸಿದರೆ ಮುಂದಿನ ಜನವರಿ ಅಥವಾ ಫೆಬ್ರವರಿ ಒಳಗೆ ಎಲ್ಲ ಬಾಕಿ ಪ್ರಕರಣಗಳು ಇತ್ಯರ್ಥ ಆಗಬಹುದು. ಅಲ್ಲದೆ, ಉಪ ವಿಭಾಗಾಧಿಕಾರಿಗಳು ವಾರಕ್ಕೆ ನಾಲ್ಕು, ವಿಶೇಷ ಉಪ ವಿಭಾಗಾಧಿಕಾರಿಗಳು ಎರಡು ಪ್ರಕರಣವನ್ನು ವಿಲೇಗೊಳಿಸಬೇಕು’ ಎಂದು ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.