ADVERTISEMENT

ಬಿಜೆಪಿಯವರಿಗೆ ವಿವೇಚನೆಯೇ ಇಲ್ಲ: ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:57 IST
Last Updated 4 ಸೆಪ್ಟೆಂಬರ್ 2024, 15:57 IST
ಸಚಿವ ಎಂ.ಬಿ ಪಾಟೀಲ
ಸಚಿವ ಎಂ.ಬಿ ಪಾಟೀಲ   

ಬೆಂಗಳೂರು: ‘ರಾಜ್ಯ ಬಿಜೆಪಿಯವರಿಗೆ ವಿವೇಚನೆಯೇ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಬಿಜೆಪಿ ಆರೋಪಕ್ಕೆ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ನಾನು ಬಾಗ್ಮನೆಯಿಂದ ₹ 4 ಕೋಟಿ ಸಾಲ ತೆಗೆದುಕೊಂಡಿದ್ದು 2001ರಲ್ಲಿ. ನೀವು (ಬಿಜೆಪಿ) ಬೊಬ್ಬೆ ಹೊಡೆಯುತ್ತಿರುವಂತೆ 2023ರಲ್ಲೂ ಅಲ್ಲ, ಚುನಾವಣೆ ಖರ್ಚಿಗಾಗಿಯೂ ಅಲ್ಲ. ಅವೆಲ್ಲ ನಮ್ಮ ಕೌಟುಂಬಿಕ ವ್ಯವಹಾರ. ಅನೇಕ ಬಾರಿ ಸಾಲ ಪಡೆದು, ವಾಪಸ್ ಕೂಡ ಕೊಟ್ಟಿದ್ದೇನೆ. ಬಾಕಿಯೂ ಇದೆ. ಈ ಆರೋಪ ಕುಚೇಷ್ಟೆ, ದುರುದ್ದೇಶದಿಂದ ಕೂಡಿದೆ’ ಎಂದಿದ್ದಾರೆ.

‘ಬಾಗ್ಮನೆ ಸಂಸ್ಥೆ ಮತ್ತು ನಮ್ಮ ಕುಟುಂಬದ ಒಡನಾಟಕ್ಕೂ ಸರ್ಕಾರದ ತೀರ್ಮಾನಕ್ಕೂ ಯಾವ ಸಂಬಂಧವೂ ಇಲ್ಲ. 2021ರಲ್ಲಿ ಬಿಜೆಪಿ ಸರ್ಕಾರವೇ ತನ್ನ ಆದೇಶದಲ್ಲಿ ನಿಗದಿಪಡಿಸಿದ್ದ ಹಂಚಿಕೆ ದರವನ್ನೇ ವಿಧಿಸಲಾಗಿದೆ. ಅದರಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ. ನಿವೇಶನ ಹಂಚಿಕೆಗೆ ಪರಿಗಣಿಸುವ ಮಾನದಂಡ ಸಂಸ್ಥೆಯ ಅರ್ಹತೆ, ಸಾಮರ್ಥ್ಯ, ಅನುಭವ ಇತ್ಯಾದಿಯೇ ಹೊರತು ವ್ಯಕ್ತಿನಿಷ್ಠ ಮಾನದಂಡಗಳಲ್ಲ. ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳನ್ನು ಒಳಗೊಂಡ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಒಮ್ಮತದ ತೀರ್ಮಾನವೇ ಹೊರತು ವೈಯಕ್ತಿಕ ನಿರ್ಧಾರವಲ್ಲ. ಬಾಗ್ಮನೆಗೆ 2005, 2006 ಮತ್ತು 2009ರಲ್ಲೆಲ್ಲ ಅಂದಂದಿನ ಸರ್ಕಾರಗಳು ಕೈಗಾರಿಕಾ ಭೂಮಿ ನೀಡಿವೆ. 2009ರಲ್ಲಿ ಇದೇ ಬಾಗ್ಮನೆ ಸಮೂಹದ ಚಂದ್ರಾ ಡೆವಲಪರ್ಸ್‌ಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 25 ಎಕರೆ ಭೂಮಿ ನೀಡಿದ್ದಾಗ ನಿಮ್ಮದೇ ಸರ್ಕಾರ ಇತ್ತಲ್ಲವೇ’ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.