ADVERTISEMENT

ಮಕ್ಕಳ ಬಿಸಿಯೂಟಕ್ಕೂ ಕುತ್ತು ತಂದ ಸಿದ್ದರಾಮಯ್ಯ ಸರ್ಕಾರ: ಬಿಜೆಪಿ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2023, 9:40 IST
Last Updated 31 ಜುಲೈ 2023, 9:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಕ್ಕಳ ಬಿಸಿಯೂಟಕ್ಕೂ ಕುತ್ತು ತಂದಿದೆ ಎಂದು ಬಿಜೆಪಿ ಟೀಕಿಸಿದೆ.

‘ಪ್ರಜಾವಾಣಿ ವರದಿ’ಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಎಲ್ಲಾ ವಲಯಗಳಲ್ಲಿಯೂ ಪ್ರಬಲವಾಗಿದ್ದ ಕರ್ನಾಟಕ, ಪ್ರಸ್ತುತ ದುರ್ಬಲ ಮುಖ್ಯಮಂತ್ರಿಯ ಆಡಳಿತಾವಧಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದ್ದು ಕೇವಲ ವರ್ಗಾವಣೆ ದಂಧೆ ಮಾತ್ರ ನಡೆಯುತ್ತಿದೆ’ ಎಂದು ವಾಗ್ದಾಳಿ ನಡೆಸಿದೆ.

‘ಜುಲೈ ತಿಂಗಳು ಮುಗಿದರೂ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಅಕ್ಕಿ ಇನ್ನೂ ಶಾಲೆಗಳಿಗೆ ತಲುಪಿಲ್ಲ. ರಾಜ್ಯ ಸರ್ಕಾರದ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ’ ಎಂದು ಬಿಜೆಪಿ ಪ್ರಶ್ನಿಸಿದೆ.

ADVERTISEMENT

ಇದನ್ನೂ ಓದಿ... ಗೌರಿಬಿದನೂರು | ಪೂರೈಕೆಯಾಗದ ಅಕ್ಕಿ, ಧಾನ್ಯ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಕಂಟಕ

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಎಷ್ಟರ ಮಟ್ಟಿಗಿದೆ ಎಂದರೆ, ಯಾರೂ ಪ್ರಶ್ನಿಸುವಂತಿಲ್ಲ, ಅಳಲು ತೋಡಿಕೊಂಡು ಪತ್ರ ಬರೆಯುವಂತಿಲ್ಲ. ವರ್ಗಾವಣೆ ದಂಧೆ, ಅನುದಾನ, ಪ್ರಿಯಾಂಕ್ ಖರ್ಗೆ‌ ವರ್ತನೆ, ಶ್ಯಾಡೋ ಸಿಎಂ ಯತೀಂದ್ರ ವಿರುದ್ಧ ಮಾತನಾಡಿದ ಸ್ವಪಕ್ಷೀಯ ಶಾಸಕರ ಮೇಲೆಯೇ ಸಿದ್ದರಾಮಯ್ಯ ಅವರ ಸರ್ಕಾರ ಮುಗಿಬಿದ್ದಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್‌ನ ಕಿಂಗ್ ಪಿನ್ ಅಫ್ಸರ್ ಪಾಷಾ ಎಂಬುದು ಎನ್‌ಐಎ ತನಿಖೆ ವೇಳೆ ಹೊರ ಬಂದಿದೆ. ಆರೋಪಿ ಶಾರೀಖ್‌ಗೆ ತರಬೇತಿ ನೀಡಿದ್ದು ಇದೇ ಅಫ್ಸರ್ ಪಾಷಾ. ಹಣ ಸಹಾಯ ಮಾಡಿದ್ದು ಸಿದ್ದರಾಮಯ್ಯರವರ ನೆಚ್ಚಿನ ಸಂಘಟನೆಯಾದ ಪಿಎಫ್‌ಐ. ಶಾರೀಖ್ ಮತ್ತು ಅಫ್ಸರ್ ಇಬ್ಬರು ಬಿರಿಯಾನಿ ತಯಾರಿಸಲು ಕುಕ್ಕರ್ ಇಟ್ಟಿದ್ದರು, ಅಷ್ಟಕ್ಕೆ ಪೋಲಿಸರು ಉಗ್ರ ಪಟ್ಟ ಕಟ್ಟಿದ್ದಾರೆ ಎಂದು ಕಾಂಗ್ರೆಸ್‌ ಟ್ವೀಟ್ ಮಾಡದಿದ್ದರೇ ಸಾಕು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.