ಬೆಂಗಳೂರು: ‘ಮಾಜಿ ಮುಖ್ಯಮಂತ್ರಿ ದೇವರಾಜ ಅರಸರು ಜಾರಿಗೆ ತಂದಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ, ಬಿಜೆಪಿ ಬಂದ ಮೇಲೆ ಉಳ್ಳವನೇ ಭೂಮಿ ಒಡೆಯ ಎನ್ನುವಂತಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ನಡೆದ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಗೋಡು ಹೋರಾಟ ಮತ್ತು ಗೇಣಿ ಹೋರಾಟದ ಫಲಾನುಭವಿಗಳು ಮತ್ತು ಯುವತಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಸಮಾರಂಭದಲ್ಲಿ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸುರವರ ವರೆಗೂ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆ. ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು’ ಎಂದೂ ಮುಖ್ಯಮಂತ್ರಿ ಹೇಳಿದರು.
‘ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಇದ್ದರೂ ಅದು ಜಾರಿ ಆಗಿರಲಿಲ್ಲ. ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಹಾವನೂರು ವರದಿ ತರಿಸಿಕೊಂಡು ಅದನ್ನು ಜಾರಿ ಮಾಡುವ ಎದೆಗಾರಿಕೆ ತೋರಿಸಿದರು. ಹೀಗೆ ಮಾಡುವಾಗ ಎಲ್ಲ ಜಾತಿ-ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಆ ಮೂಲಕ ಸಂವಿಧಾನಬದ್ದವಾದ ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೆ ತಂದರು’ ಎಂದು ವಿವರಿಸಿದರು.
ಅರಸು ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ: ‘ಸಮಾಜವಾದಿ ಚಳವಳಿ ಮತ್ತು ಗೇಣಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜು ಅರಸು ಪ್ರಶಸ್ತಿ ಲಭಿಸಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ’ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
‘ನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲೇ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಬಹಳಷ್ಟು ಯುವ ನಾಯಕರನ್ನು ಕಾಗೋಡು ತಿಮ್ಮಪ್ಪ ಬೆಳೆಸಿದ್ದಾರೆ’ ಎಂದೂ ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಇದ್ದರು. ಕಾರ್ಯಕ್ರಮಕ್ಕೂ ಮೊದಲು ವಿಧಾನಸೌಧದ ಪಶ್ಚಿಮದ್ವಾರದಲ್ಲಿರುವ ದೇವರಾಜ ಅರಸು ಅವರ ಪ್ರತಿಮೆಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.