ನವದೆಹಲಿ: ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯ ದುಡ್ಡಿನ ಬದಲು ಬೇಳೆ, ಸಕ್ಕರೆ ಹಾಗೂ ಎಣ್ಣೆ ನೀಡುವಂತೆ ಶೇ 93ರಷ್ಟು ಫಲಾನುಭವಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿ, ‘ರಾಜ್ಯಕ್ಕೆ ಬರಬೇಕಾದ ಅಕ್ಕಿ ಸರಬರಾಜು ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.
‘ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರವು 5 ಕೆ.ಜಿ. ಅಕ್ಕಿ ಕೊಡುತ್ತಿದೆ. ಅನ್ನ ಭಾಗ್ಯ ಯೋಜನೆಗೆ ಬೇಕಿರುವ ಅಕ್ಕಿ ನೀಡುವಂತೆ ಕಳೆದ ವರ್ಷ ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸ್ಪಂದಿಸಿರಲಿಲ್ಲ. ಹೀಗಾಗಿ, ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಬದಲು ಹಣ ನೀಡಲಾಗುತ್ತಿದೆ. ಈ ಯೋಜನೆಯ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸಿದೆ. ಬೇಳೆ ಹಾಗೂ ಇತರ ಆಹಾರ ಧಾನ್ಯಗಳನ್ನು ಕೊಡುವಂತೆ ಫಲಾನುಭವಿಗಳು ವಿನಂತಿಸಿದ್ದಾರೆ’ ಎಂದರು.
ರಾಜ್ಯದ 13 ಲಕ್ಷ ಬಿಪಿಎಲ್ ಕಾರ್ಡುದಾರರಿಗೆ (40 ಲಕ್ಷ ಫಲಾನುಭವಿಗಳಿಗೆ) ರಾಜ್ಯ ಸರ್ಕಾರ ಅಕ್ಕಿ ಕೊಡುತ್ತಿದೆ. ಇದಕ್ಕೆ 20 ಸಾವಿರ ಟನ್ ಅಕ್ಕಿ ಬೇಕಿದೆ. ಈ ಅಕ್ಕಿಯನ್ನು ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ರಾಜ್ಯದ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂದು ಸಚಿವ ಜೋಶಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.