ಬೆಂಗಳೂರು: ‘ರಾಜ್ಯ ಕಾಂಗ್ರೆಸ್ ಸರ್ಕಾರ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ‘ಯಡಿಯೂರಪ್ಪ ವಿಚಾರದಲ್ಲಿ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ’ ಎಂದರು.
‘ಲೋಕಸಭೆ ಚುನಾವಣೆ ಮುಗಿದ ಕೂಡಲೇ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಲಾಗಿದೆ. ಇದು ಪಕ್ಕಾ ದ್ವೇಷದ ರಾಜಕಾರಣ. ಇದಕ್ಕೆ ಪೂರಕವಾಗಿ, ನಮ್ಮನ್ನು ಕೋರ್ಟ್‍ಗೆ ಕರೆಸಿದ್ದೀರಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ರೀತಿಯ ದ್ವೇಷದ ರಾಜಕಾರಣ ಸರಿಯಲ್ಲ’ ಎಂದು ಕಿಡಿಕಾರಿದರು.
‘ಇಂತಹ ದ್ವೇಷದ ರಾಜಕೀಯ ತಮಿಳುನಾಡಿನಲ್ಲಿ ಇತ್ತು. ಈಗ ಕರ್ನಾಟಕಕ್ಕೂ ಬಂದಿದೆ. ಗೃಹ ಸಚಿವ ಜಿ. ಪರಮೇಶ್ವರ ಕೂಡಾ ಬಿಎಸ್‍ವೈ ವಿರುದ್ಧ ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಿದ್ದರು. ಚುನಾವಣೆ ಆದ ಮೇಲೆ ನೊಟೀಸ್ ಕೊಟ್ಟು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
‘ಮುಖ್ಯಮಂತ್ರಿಯನ್ನು ಬಿಟ್ಟರೆ ನಂತರದ ಸ್ಥಾನದಲ್ಲಿ ಇರುವವವರು ಗೃಹ ಮಂತ್ರಿ. ಅವರೇ ಆಕೆ ಮಾನಸಿಕ ಅಸ್ವಸ್ಥೆ ಎಂಬ ಪ್ರಮಾಣಪತ್ರ ಕೊಟ್ಟಿದ್ದರು. ಈಗ ಯಾಕೆ ಉಲ್ಟಾ ಹೊಡೆಯುತ್ತಿದ್ದಾರೆ? ಅವತ್ತು ಆ ರೀತಿ ಹೇಳುವಾಗ ಜ್ಞಾನ ಇರಲಿಲ್ಲವೇ? ನಾಲ್ಕು ತಿಂಗಳು ಯಾಕೆ ಕಾಯುತ್ತಾ ಕುಳಿತಿರಿ? ಯಡಿಯೂರಪ್ಪ ಇಲ್ಲೇ ಇದ್ದರೂ ಯಾಕೆ ವಿಚಾರಣೆ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.
‘ನಮ್ಮ ಮೇಲೆ ಶೇ 40 ಲಂಚದ ಆರೋಪ ಮಾಡಿದ್ದೀರಿ. ಅದನ್ನು ನೀವು ಸಾಬೀತು ಮಾಡಬೇಕೆಂದು ನಾವು ಕೋರ್ಟ್ ಹೋಗಿದ್ದೇವೆ. ಯತ್ನಾಳ್ ₹ 2,500 ಕೋಟಿ ಆರೋಪ ಮಾಡಿದ್ದರೆ, ಅವರಿಗೆ ನೋಟಿಸ್ ಕೊಟ್ಟು ಕರೆಸಿ. ಅವರು ಆ ರೀತಿ ಹೇಳಿದ್ದಾರೊ, ಇಲ್ಲವೋ ಗೊತ್ತಾಗುತ್ತದೆ’ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ ತಿರುಗೇಟು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.