ಬೆಂಗಳೂರು: ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶನ ಚಿತ್ರ ಮುದ್ರಿಸಬೇಕು ಎಂಬ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆಯನ್ನು ನಟ ‘ಆ ದಿನಗಳು’ ಚೇತನ್ ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ಫೋಟೋಗಳನ್ನು ಮುದ್ರಿಸಿ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಗ್ರಹಿಸಿದ್ದಾರೆ. ಇದರಿಂದ ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದು ಕೂಡ ವಾದಿಸಿದ್ದಾರೆ. ಇದು ಎಷ್ಟು ಅಸಂಬದ್ಧವಾದ ಹೇಳಿಕೆ? ಎಂದು ಅವರು ಪಶ್ನೆ ಮಾಡಿದ್ದಾರೆ.
ಮುಂದುವರಿದು, ‘ಇಂತಹ ಅಸಾಂವಿಧಾನಿಕ, ಮೌಢ್ಯಗಳ ಹೇರಿಕೆಯನ್ನು ಕೇಜ್ರಿವಾಲ್ ಅವರು ನಿಲ್ಲಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಹಲವಾರು ಬ್ರಾಹ್ಮಣ್ಯದ ಪಕ್ಷಗಳಿವೆ. ಇನ್ನೊಂದರ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅರವಿಂದ ಕೇಜ್ರಿವಾಲ್, ‘ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಭಾವಚಿತ್ರದ ಜತೆಗೆ ಲಕ್ಷ್ಮಿದೇವಿ, ಗಣೇಶನ ಫೋಟೊಗಳನ್ನು ಹಾಕಬೇಕೆಂಬುದು ನನ್ನ ಬಯಕೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದರು.
‘ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಪಡಬೇಕಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಕೆಲವೊಮ್ಮೆ ಉತ್ತಮ ಫಲಿತಾಂಶ ದೊರೆಯದೇ ಇರುವುದರಿಂದ ದೇವರ ಆಶೀರ್ವಾದ ಬೇಕಿರುತ್ತದೆ. ಅದಕ್ಕಾಗಿ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶ ದೇವರ ಭಾವಚಿತ್ರಗಳಿದ್ದರೆ ಇಡೀ ದೇಶಕ್ಕೆ ಆಶೀರ್ವಾದ ಸಿಗುತ್ತದೆ’ ಎಂದು ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
ಇಂಡೋನೇಷ್ಯಾದಲ್ಲಿ ಕರೆನ್ಸಿ ನೋಟಿನ ಮೇಲೆ ಗಣೇಶ ಭಾವಚಿತ್ರನ್ನು ಮುದ್ರಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇತ್ತೀಚೆಗೆ ‘ಕಾಂತಾರ’ ಚಿತ್ರದ ವಿಮರ್ಶೆ ಮಾಡಿದ್ದ ನಟ ಚೇತನ್, ಚಿತ್ರದಲ್ಲಿ ತೋರಿಸಿರುವ ಭೂತ ಕೋಲ ಹಿಂದೂ ಸಂಸ್ಕೃತಿಯಲ್ಲ ಎನ್ನುವ ಮೂಲಕ ವಿವಾದಕ್ಕೆ ಸಿಲುಕಿದ್ದರು.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.