ADVERTISEMENT

ಪಾದರಾಯನಪುರ ಗಲಭೆ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 23:30 IST
Last Updated 19 ಮಾರ್ಚ್ 2024, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕೋವಿಡ್‌-19ರ ಲಾಕ್‌ಡೌನ್‌ ಅವಧಿಯಲ್ಲಿ, ಪಾದರಾಯನಪುರದಲ್ಲಿ ಅಕ್ರಮವಾಗಿ ಗುಂಪುಗೂಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಗಲಭೆ ಪ್ರಕರಣದಲ್ಲಿ 375 ಆರೋಪಿಗಳ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಸಂಬಂಧ ನವಾಜ್‌ ಪಾಷಾ ಸೇರಿದಂತೆ ಇತರೆ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌–2 ಬಿ.ಎನ್‌.ಜಗದೀಶ್‌, ‘2020ರ ಏಪ್ರಿಲ್ 19ರಂದು ಸಂಜೆ ಬಿಬಿಎಂಪಿ ಅಧಿಕಾರಿಗಳು ಕೋವಿಡ್‌ ಸೋಂಕು ತಗುಲಿದ್ದ 58 ಮಂದಿಯನ್ನು ವಶಕ್ಕೆ ತೆಗೆದಕೊಳ್ಳಲು ಪಾದರಾಯನಪುರಕ್ಕೆ ತೆರಳಿದ್ದರು. ಆಗ ಅಲ್ಲಿ ಅಕ್ರಮವಾಗಿ ಗುಂಪುಗೂಡಿದ್ದವರು ಕೈಯಲ್ಲಿ ಚಾಕು, ದೊಣ್ಣೆ ಮತ್ತು ರಾಡ್‌ಗಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು. ಕುರ್ಚಿ, ಟೇಬಲ್‌ಗಳನ್ನು ಒಡೆದು ಹಾಕಿ ಅಲ್ಲಿದ್ದ ಟೆಂಟ್‌ ಕಿತ್ತೆಸೆದು ಅಕ್ಕಪಕ್ಕದ ರಸ್ತೆಗಳಲ್ಲಿನ ಸಾರ್ವಜನಿಕರ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದರು’ ಎಂದು ವಿವರಿಸಿದ್ದರು.

ADVERTISEMENT

ಇದನ್ನು ವಿರೋಧಿಸಿದ್ದ ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಅವರೆಲ್ಲರ ಮನೆಗಳು ಬೇರೆಡೆ ಇವೆ. ಪೊಲೀಸರು ನಿಜವಾದ ಆರೋಪಿಗಳನ್ನು ಗುರುತಿಸದೆ ಸಂಬಂಧ ಇಲ್ಲದವರ ಮೇಲೆಲ್ಲಾ ಪ್ರಕರಣ ದಾಖಲಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಾಗ ಅವರಲ್ಲಿ ಸೋಂಕಿತರ ಪಟ್ಟಿಯೇ ಇರಲಿಲ್ಲ. ಗಲಭೆ ನಡೆದಿದೆ ಎನ್ನಲಾಗಿದೆ. ಆದರೆ ಯಾರೊಬ್ಬರಿಗೂ ಗಾಯವಾಗಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ವಾದ–ಪ್ರತಿವಾದ ಆಲಿಸಿದ್ದ ನ್ಯಾಯಪೀಠ, ‘ಭಾರತೀಯ ದಂಡ ಸಂಹಿತೆ–1860ರ ಕಲಂ 172ರಿಂದ 188ರವರೆಗಿನ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ವಿವಿಧ ಕಲಂಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಕುರಿತಂತೆ ಸಕ್ಷಮ ಪ್ರಾಧಿಕಾರ ದೂರು ದಾಖಲಿಸಿಲ್ಲ. ಅಂತೆಯೇ, ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರವನ್ನು ಸೀಲ್‌ ಡೌನ್‌ ಮಾಡಲು ಹೋದಾಗ 51 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು ಎಂದು ಹೇಳಿದ್ದಾರೆ. ಆದರೆ, ಯಾರಿಗೆಲ್ಲಾ ಆ ಸೋಂಕು ತಗುಲಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ಆರೋಪಪಟ್ಟಿಯಲ್ಲಿ ದಾಖಲಿಸಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

‘ಪೊಲೀಸರು 120ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಗಲಭೆ ನಡೆದಿದೆ ಎನ್ನಲಾದ ಸಮಯದಲ್ಲಿ ಯಾವುದೇ ಆಸ್ತಿ–ಪಾಸ್ತಿ ನಷ್ಟವಾಗಿಲ್ಲ. ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಸಾಕ್ಷಿಗಳ ಹೇಳಿಕೆಗಳನ್ನು ಒಂದೇ ರೀತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಎಲ್ಲರ ವಿರುದ್ಧದ ಪ್ರಕರಣ ರದ್ದುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.