ಬೆಂಗಳೂರು: ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳ ವಿಚಾರಣೆ ಪೂರೈಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.
ಈ ಸಂಬಂಧ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ವಿಚಾರಣೆ ನಡೆಸಿದರು.
ಒಪ್ಪಿಗೆ ಕ್ರಿಯೆ: ವಿಚಾರಣೆ ವೇಳೆ ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಪ್ರಕರಣದಲ್ಲಿ ಸಂತ್ರಸ್ತೆಯ ಪುತ್ರಿ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಆದರೆ, ಆಕೆಯ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ. ಒಂದೊಮ್ಮೆ ಅತ್ಯಾಚಾರ ನಡೆದಿದ್ದರೂ ಇದು ಒಪ್ಪಿಗೆಯಿಂದ ನಡೆದ ಕೃತ್ಯವಾಗಿದೆ’ ಎಂದರು.
‘ಆರೋಪಿ ಮತ್ತು ಸಂತ್ರಸ್ತೆ ವಿಡಿಯೊದಲ್ಲಿ ಇರುವುದರ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟತೆ ನೀಡಿಲ್ಲ. ಸಂತ್ರಸ್ತೆಯು ನೀಡಿರುವ ದೂರಿನ ವಿಶ್ವಾಸಾರ್ಹತೆ ಬಗ್ಗೆಯೂ ಅನೇಕ ಆಕ್ಷೇಪಗಳಿವೆ. ಸಂತ್ರಸ್ತೆಯು ಲೋಕಸಭಾ ಚುನಾವಣೆಯ ಮತದಾನಕ್ಕೂ ಕೆಲವು ದಿನಗಳ ಮೊದಲು ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅಲ್ಲಾಗಲೀ ಅಥವಾ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ –1973ರ (ಸಿಆರ್‌ಪಿಸಿ) ಕಲಂ164ರ ಅನುಸಾರ ಮ್ಯಾಜಿಸ್ಟ್ರೇಟ್ ಮುಂದೆ ನೀಡಿರುವ ಹೇಳಿಕೆಯಲ್ಲಾಗಲೀ ಅತ್ಯಾಚಾರದ ಆರೋಪ ಮಾಡಿಲ್ಲ. ಐದು ವರ್ಷ ತಡವಾಗಿ ದೂರು ನೀಡಿರುವುದಕ್ಕೆ ಆಕೆ ವಿವರಣೆ ನೀಡಿಲ್ಲ’ ಎಂದರು.
‘ಅರ್ಜಿದಾರರು 2024ರ ಮೇ 30ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ನ್ಯಾಯಿಕ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ನ್ಯಾಯಪೀಠ ವಿಧಿಸುವ ಯಾವುದೇ ಷರತ್ತುಗಳಿಗೆ ತಲೆಬಾಗುತ್ತಾರೆ. ಹಾಗಾಗಿ, ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಆದ ಹಿರಿಯ ವಕೀಲ ರವಿವರ್ಮ ಕುಮಾರ್, ‘ಆರೋಪಿ ಪ್ರಜ್ವಲ್ ಒಬ್ಬ ಸಂಸದರಾಗಿದ್ದವರು. ಅತ್ಯಾಚಾರದ ವಿವರ ಬಹಿರಂಗಪಡಿಸಿದರೆ ಸಂತ್ರಸ್ತೆಯ ಪತಿಯನ್ನು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದವರು. ಅಶ್ಲೀಲ ವಿಡಿಯೊಗಳನ್ನು ಬಿಡುಗಡೆ ಮಾಡುವುದಾಗಿಯೂ ಎಚ್ಚರಿಸಿದ್ದರು. ಇದರಿಂದಾಗಿ ಸಂತ್ರಸ್ತೆ ತಡವಾಗಿ ದೂರು ದಾಖಲಿಸಿದ್ದಾರೆ’ ಎಂದರು.
‘ದೂರು ದಾಖಲಾಗುತ್ತಿದ್ದಂತೆ ಪ್ರಜ್ವಲ್ ದೇಶ ತೊರೆದಿದ್ದರು. ಇದುವರೆಗೂ ಅವರು ತಮ್ಮ ಫೋನ್ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಸಂತ್ರಸ್ತೆಯ ಪುತ್ರಿಯ ಹೇಳಿಕೆ ಹಾಗೂ ಎಫ್‌ಎಸ್‌ಎಲ್ ವರದಿ ಕೃತ್ಯವನ್ನು ಖಾತರಿಪಡಿಸಿದೆ. ಪ್ರಜ್ವಲ್ ಶೌಚಾಲಯದಲ್ಲಿ ತೆಗೆದಿರುವ ಚಿತ್ರಗಳು, ಸ್ಥಳದ ಪಂಚನಾಮೆ, ಎಫ್‌ಎಸ್‌ಎಲ್ ವರದಿ ಎಲ್ಲವೂ ಆರೋಪದ ಕೃತ್ಯಕ್ಕೆ ಹೊಂದಾಣಿಕೆಯಾಗಿವೆ. ಹಾಗಾಗಿ, ಇವರಿಗೆ ಜಾಮೀನು ಮಂಜೂರು ಮಾಡಬಾರದು’ ಎಂದು ಮನವಿ ಮಾಡಿದರು. ವಾದ–ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.